18 ಮಂದಿ ಐಎಎಸ್ ಅಧಿಕಾರಿಗಳ ವಿರುದ್ಧ ಇಡಿಗೆ ದೂರು

ramesh letter
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಸೇರಿ ವಿವಿಧ ಮೂಲಸೌಕರ್ಯ ಕಲ್ಪಿಸಲು ಬಿಡುಗಡೆಯಾಗಿರುವ ಅನುದಾನವನ್ನು 18 ಮಂದಿ ಐಎಎಸ್ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದು, ಇವರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡಿದ್ದಾರೆ.

2013-14ನೇ ಸಾಲಿನಿಂದ 2023-24ರ ಅವಧಿಯ ಹತ್ತು ವರ್ಷದಲ್ಲಿ ಪಾಲಿಕೆಯ ರಸ್ತೆಗಳ ಅಭಿವೃದ್ಧಿಗ್ಲೆ 46,300 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಶೇ.75 ಹಣ ದುರ್ಬಳಕೆಯಾಗಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ 4,113 ಪುಟಗಳ ದಾಖಲೆ ಹೊಂದಿರುವ ಸಿ.ಡಿ.ಯನ್ನು ಇಡಿಗೆ ಸಲ್ಲಿಸಲಾಗಿದೆ.

ದೂರಿನಲ್ಲಿ ಬಿಬಿಎಂಪಿಯ ಹಾಲಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 8 ವಲಯಗಳ ವಲಯ ಆಯುಕ್ತರು ಸೇರಿ ಕಳೆದ 10 ವರ್ಷದಲ್ಲಿ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿರುವ 18 ಐಎಎಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಇವರೆಲ್ಲರ ವಿರುದ್ಧ ಬಿಎನ್‌ಎಸ್ - 2023ರ ಅನ್ವಯ ಸಾರ್ವಜನಿಕರ ಹಣ ದುರ್ಬಳಕೆ, ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ ಎಂದು ಅವರು ಮಂಗಳವಾರ ತಿಳಿಸಿದ್ದಾರೆ.

ಭ್ರಷ್ಟಾಚಾರದಿಂದ ಕಳಪೆ ಕಾಮಗಾರಿ?:

ರಸ್ತೆ ಡಾಂಬರೀಕರಣಕ್ಕಾಗಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿರುವುದರಿಂದ ರಸ್ತೆಗಳು ಬೇಗನೆ ಹಾಳಾಗುತ್ತಿವೆ. ಕಾಂಕ್ರೀಟ್ ರಸ್ತೆಗಳನ್ನು ಮಾಡಲು ಎಂ-40 ಬದಲು ಎಂ - 20 ದರ್ಜೆಯ ಸಿಮೆಂಟ್ ಕಾಂಕ್ರೀಟ್ ಮಿಕ್ಸ್ ಬಳಸುತ್ತಿರುವುದು ಭ್ರಷ್ಟಾಚಾರಕ್ಕೆ ಅವಕಾಶವಾಗಿದೆ. ಕಳಪೆ ಕಾಂಕ್ರೀಟ್ ಮಿಕ್ಸ್‌ಅನ್ನು ಹೊಸಕೋಟೆ ಸಮೀಪದ ಸ್ಥಳದಿಂದ ತರಿಸಲಾಗುತ್ತಿದೆ. ಇದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಲಿಕೆಯಲ್ಲಿ ಗುಣ ನಿಯಂತ್ರಣ ವಿಭಾಗದಲ್ಲಿ ಸ್ವಂತ ಲ್ಯಾಬ್ ಇಲ್ಲದೆ ಅನ್ಯ ರಾಜ್ಯಗಳನ್ನು ಆಶ್ರಯಿಸಬೇಕಿದೆ. ಹೀಗಾಗಿ ಬೂದು ಬಣ್ಣದಲ್ಲಿ ಇರಬೇಕಾದ ವೈಟ್ ಟಾಪಿಂಗ್ ರಸ್ತೆಗಳು ಬಿಳಿಯ ಬಣ್ಣದಲ್ಲಿದ್ದು, ಬೇಗನೆ ಹಾಳಾಗುತ್ತಿದೆ. ಇತ್ತೀಚಿಗೆ ನೆರೆಯ ರಾಜ್ಯಗಳ ಗುತ್ತಿಗೆದಾರರಿಗೆ ಟೆಂಡರ್ ನೀಡಲೆಂದೇ ಗುತ್ತಿಗೆ ಮೊತ್ತವನ್ನು ಹೆಚ್ಚಿಸುತ್ತಿರುವುದರಿಂದ ದೊಡ್ಡ ಮೊತ್ತವು ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net