

ಮಂಡ್ಯ: ಕೆರಗೋಡು ಹನುಮಾನ್ ಧ್ವಜ ತೆರವು ಪ್ರಕರಣ ಬೂದಿಮುಚ್ಚಿದ ಕೆಂಡತಂದಿರುವ ಪರಿಸ್ಥಿತಿಯ ನಡುವೆ ಗ್ರಾಮದಲ್ಲಿ ಮತ್ತೊಂದು ವಿವಾದ ಸದ್ದು ಮಾಡುತ್ತಿದೆ.
ಗಣರಾಜ್ಯೋತ್ಸವ ದಿನ ಸರ್ಕಾರಿ ಶಾಲೆಯ ಮಕ್ಕಳನ್ನು ಮುಖ್ಯ ಶಿಕ್ಷಕಿ ವಿವಾದಿತ ಸ್ಥಳಕ್ಕೆ ಕರೆದೊಯ್ದು ಗೌರಿಶಂಕರ ಸೇವಾ ಟ್ರಸ್ಟ್ ಆಯೋಜಿಸಿದ ಧ್ವಜಾರೋಹಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಮಾತ್ರವಲ್ಲದೆ ಅದೇ ದಿನ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಆರ್‌ಎಸ್‌ಎಸ್ ಸಂಚಾಲಕರಿಂದ ಧ್ವಜಾರೋಹಣ ಮಾಡಿಸುವುದರ ಜತೆಗೆ ನಾವೆಲ್ಲ ಹಿಂದು, ನಾವೆಲ್ಲ ಒಂದು ಎಂದು ಪ್ರತಿಜ್ಞಾವಿಧಿ ಬೋಧಿಸಲಾಗಿದೆ. ಜೈ ಶ್ರೀರಾಂ ಚಿಹ್ನೆ ಮುದ್ರಿತ ಇರುವ ಕವರ್‌ನಲ್ಲಿ ಲಾಡು ವಿತರಿಸಲಾಗಿದೆ ಎಂದು ಆರೋಪಿಸಿ ಡಿಡಿಪಿಐ ಶಿವರಾಮೇಗೌಡ ಅವರಿಗೆ ದೂರು ಸಲ್ಲಿಕೆಯಾಗಿದೆ.
ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಮ್ಮ, ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಒಂದು ಧರ್ಮದ ಪರ ಒಲವು ತೋರಿದ ಬಗ್ಗೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರಾದ ಕೆ.ಎಂ.ಸಂತೋಷ್‌ಕುಮಾರ್, ಲೋಕೇಶ್, ಕೆ.ಸಿ.ಉಮಾಶಂಕರ್ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರಿನ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಂಡ್ಯ ಉತ್ತರ ವಲಯ ಬಿಇಒಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಶಿವರಾಮೇಗೌಡ ‘ವಿಜಯವಾಣಿ’ಗೆ ತಿಳಿಸಿದರು.