ತಹಸಿಲ್ದಾರ್ ವಿರುದ್ಧ ಎಚ್.ಕೊಂಗಳ್ಳಿ ಗ್ರಾಮಸ್ಥರಿಂದ ಮುಖ್ಯಕಾರ್ಯದರ್ಶಿಗೆ ದೂರು

27
Published on

ಮೈಸೂರು: ಸರ್ಕಾರಿ ಭೂಮಿ ಕಬಳಿಕೆಯಂತಹ ಪ್ರಕರಣದ ಕುರಿತು ದಾಖಲೆಗಳನ್ನು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ತಾತ್ಸಾರ ಮಾಡಲಾಗಿದೆ ಎಂದು ನಂಜನಗೂಡು ತಹಸೀಲ್ದಾರ್ ಶಿವಕುಮಾರ ಕಾಸನೂರ ವಿರುದ್ಧ ನಂಜನಗೂಡು ತಾಲೂಕು ಎಚ್.ಕೊಂಗಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಮೂಲಕ ಕಂದಾಯ ಸಚಿವರು ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ನಂಜನಗೂಡು ತಾಲೂಕು ಕಸಬಾ ಹೋಬಳಿ ಎಚ್.ಕೊಂಗಳ್ಳಿ ಗ್ರಾಮದಲ್ಲಿರುವ ಸರ್ವೆ ನಂ. 6/1, 6/2 ಹಾಗೂ 7ರಲ್ಲಿರುವ ಸುಮಾರು 4.27 ಎಕರೆ ಸರ್ಕಾರಿ ಜಮೀನು ಹಾಗೂ ಸ್ಮಶಾನ ಜಾಗವನ್ನು ಕೆಲವರು ಹಲವು ವರ್ಷದಿಂದ ಭೂ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ದಾಖಲೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಾನೂನು ಬಾಹಿರ ಭೂ ಕಬಳಿಕೆಯನ್ನು ತಡೆಯಲು ಗ್ರಾಮಸ್ಥರು ಒಂದು ವರ್ಷದಿಂದ ಹೋರಾಟ ಮಾಡುತ್ತಿರುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ತಹಸೀಲ್ದಾರ್ 2023ರ ಜೂ.30 ರಂದೇ ಅರ್ಜಿ ಸಲ್ಲಿಸಿದ್ದೇವೆ. ಭೂ ಕಬಳಿಕೆಯನ್ನು ತಡೆಯಲು ಹೋದ ಗ್ರಾಮ ಲೆಕ್ಕಾಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗಿ ವಾಪಸ್ ಕಳುಹಿಸಿದ್ದಾರೆ. ಈ ಸಂಬಂದ ಭೂಗಳ್ಳರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಮತ್ತು ಸದರಿ ಭೂಮಿಯನ್ನು ತರೆವು ಮಾಡಿಸಬೇಕು ಎಂದು ಮೇಲಧಿಕಾರಿಗಳಿಗೆ ಗ್ರಾಮ ಲೆಕ್ಕಾಧಿಕಾರಿಯು 2023ರ ಜು.7ರಂದು ವರದಿ ಸಲ್ಲಿಸಿದರು. ಆದರೂ ತಹಸೀಲ್ದಾರ್ ಸುಮ್ಮನೆ ಇದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮಸ್ಥರು ನೀಡಿದ ಅರ್ಜಿ, ಗ್ರಾಮ ಲೆಕ್ಕಾಧಿಕಾರಿ ವರದಿ ನೀಡಿ 6 ತಿಂಗಳಾದರೂ ಕಾನೂನು ಕ್ರಮ ಕೈಗೊಳ್ಳದ ತಹಸೀಲ್ದಾರ್ ಬೇಜವಾಬ್ದಾರಿ ನಡತೆಯಿಂದ ಉತ್ತೇಜನಗೊಂಡ ಭೂಗಳ್ಳರು ಸದರಿ ಜಮೀನು ಹಾಗೂ ಶ್ಮಶಾನಗಳಿಗೆ ತಂತಿಬೇಲಿ ಹಾಕಿ, ಕಾಡುಮರಗಳನ್ನು ಕಡಿದು, ಷೆಡ್ ಇತ್ಯಾದಿಗಳನ್ನು ಕಟ್ಟಿದ್ದಾರೆ ಎಂದು ದೂರಿದರು.
ಶಾಸಕರು, ಸಂಸದರಿಗೆ ದೂರು ನೀಡಿದ ನಂತರ 2024ರ ಜ.16ರಂದು ಕಂದಾಯ ಅಧಿಕಾರಿಗಳು ಬಂದು ಕಟ್ಟಿದ್ದ ಷೆಡ್‌ಗಳು, ತಂತಿಬೇಲಿಗಳನ್ನು ತೆರವುಗೊಳಿಸಿ ಜಮೀನು ಸ್ಮ್ಮಶಾನ ಮತ್ತು ಸರ್ಕಾರಿ ಸ್ವತ್ತೆಂದೂ, ಅಲ್ಲಿ ಸಾಗುವಳಿ ಮಾಡುವುದು ಕಾನೂನು ಬಾಹಿರವೆಂದು ಫಲಕ ನೆಡೆಸಿದ್ದರೂ ಕಬಳಿಕ ಭೂಮಿಯನ್ನು ಸ್ವಾಧೀನಕ್ಕೆ ತೆಗೆದು ಕೊಂಡಿಲ್ಲ ಎಂದಿದ್ದಾರೆ.
ಸರ್ಕಾರಿ ಜಮೀನು ಮತ್ತು ಸ್ಮಶಾನ ಭೂ ಕಬಳಿಕೆ ಮಾಡಿದ್ದವರ ಮೇಲೆ ಯಾವ ಕ್ರಮವನ್ನು ಕೈಗೊಳ್ಳದೆ ತಹಸೀಲ್ದಾರ್, ಮೌನ ವಹಿಸಿದ್ದರಿಂದ ಉತ್ತೇಜನಗೊಂಡ ದುಷ್ಕರ್ಮಿಗಳು ತೆರವುಗೊಳಿಸಿದ್ದ ಜಮೀನಿನಲ್ಲಿ ನೆಟ್ಟಿದ್ದ ಫಲಕವನ್ನು ಕತ್ತರಿಸಿ ಎಸೆದಿದ್ದಾರೆ. ಈ ಘಟನೆ ಸಂಭವಿಸಿ ವರ್ಷ ಕಳೆದರೂ ತಹಸೀಲ್ದಾರ್ ಸ್ಥಳ ಪರಿಶೀಲಿಸಿಲ್ಲ. ಇದರಿಂದ ರಾಜಾರೋಷವಾಗಿ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವುದಲ್ಲದೆ, ಪರಭಾರೆ ಮಾಡಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದ್ದಾರೆ.
ಸರ್ಕಾರಿ ಜಾಗ ಇದ್ದರೂ, ಏತ ನೀರಾವರಿ ಯೋಜನೆಗಾಗಿ ಒತ್ತುವರಿಯಾಗಿರುವ ಜಾಗದ ಪಕ್ಕದಲ್ಲಿಯೇ ಸರ್ಕಾರ 60 ಲಕ್ಷ ರೂ. ನೀಡಿ ಖಾಸಗಿಯವರಿಂದ ಒಂದು ಎಕರೆ ಭೂಮಿ ಖರೀದಿ ಮಾಡಿರುವುದು ವಿಪರ್ಯಸ. ತಹಸೀಲ್ದಾರ್ ಕ್ರಮದಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುಖಂಡರಾದ ಎಲ್.ಬಸವರಾಜಯ್ಯ, ದೇವಣ್ಣ, ಮಹೇಶ್, ಮನುಕುಮಾರ್, ರವಿ, ಕೆ.ಸಿ.ನೀಲಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net