ಖೊಟ್ಟಿ ದಾಖಲೆ ಸೃಷ್ಠಿಸಿ ಗ್ರಾಮ ಮಂಡಳ ನವೀಕರಣ, ಸಹಕಾರಿ ಉಪ ನಿಬಂಧಕರ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

Lokayukta
Published on

ವಿಜಯಪುರ: ಗ್ರಾಮ ಮಂಡಳವೊಂದರ ಅಧ್ಯಕ್ಷರು ಮತ್ತು ಸದಸ್ಯರ ಸಹಿ ಫೋರ್ಜರಿ ಮಾಡಿ ರಾಜೀನಾಮೆ ಪತ್ರ ತಯಾರಿಸಿ ಖೊಟ್ಟಿಯಾಗಿ ದಾಖಲೆ ಸೃಷ್ಠಿಸಿ ಹೊಸ ಮಂಡಳಿ ರಚನೆಗೆ ಅವಕಾಶ ಕಲ್ಪಿಸಿದ್ದಲ್ಲದೇ ಸಂಘದ ನವೀಕರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಹಕಾರಿ ಉಪ ನಿಬಂಧಕರು ಹಾಗೂ ಕೇಸ್ ವರ್ಕರ್ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಶ್ರೀ ಬಸವೇಶ್ವರ ಗ್ರಾಮ ಮಂಡಳಿಯಲ್ಲಿ ಇಂಥದ್ದೊಂದು ಪ್ರಕರಣ ಕಂಡು ಬಂದಿದ್ದು, ರಮೇಶ ಬಸನಗೌಡ ಪಾಟೀಲ ಎಂಬುವರು ದೂರು ಸಲ್ಲಿಸಿದ್ದಾರೆ.

ಗ್ರಾಮ ಮಂಡಳ ರಚನೆಯಾದಾಗಿನಿಂದ ತಾವೇ ಅಧ್ಯಕ್ಷರಿದ್ದು, 2022-23ನೇ ಸಾಲಿನ ಕಾರ್ಯಕಾರಿ ಮಂಡಳಿಯಲ್ಲಿಯೂ ಮುಂದುವರಿದಿದ್ದೆ. ಉಪಾಧ್ಯಕ್ಷರಾಗಿ ಸಂಗಪ್ಪ ಸಿದ್ರಾಮಪ್ಪ ಮುಡಪಲದಿನ್ನಿ, ಕಾರ್ಯದರ್ಶಿಯಾಗಿ ವಿಶ್ವನಾಥ ಮಲ್ಲನಗೌಡ ಪಾಟೀಲ, ಸದಸ್ಯರಾಗಿ ಶ್ರೀಶೈಲ ಸಂಗಪ್ಪ ವಾಲಿಕಾರ, ಭಗವಂತ ಶಿವಾಜಿ ಮೈಲಿಕರ, ಲಕ್ಷ್ಮಿ ರಮೇಶ ಪಾಟೀಲ, ಕಾಶಿಬಾಯಿ ಬಸನಗೌಡ ಪಾಟೀಲ ಮುಂದುವರಿದಿದ್ದರು. ಆದರೆ, ಅಧ್ಯಕ್ಷರ ಸಹಿ ಫೋರ್ಜರಿ ಮಾಡಿ ಖೊಟ್ಟಿ ದಾಖಲೆ ಸೃಷ್ಠಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತೆಗೆದುಹಾಕಿ 2023-24ನೇ ಸಾಲಿಗೆ ನವೀಕರಿಸಲಾಗಿದೆ.

ಜಿಲ್ಲಾ ಸಂಘಗಳ ನೋಂದಣಿ ಅಧಿಕಾರಿ ಹಾಗೂ ಸಹಕಾರಿ ಸಂಘಗಳ ಉಪ ನಿಬಂಧಕಿ ಎಸ್.ಕೆ. ಬಾಗ್ಯಶ್ರೀ ಮತ್ತು ಕೇಸ್‌ವರ್ಕರ್ ಎಂ.ಎಸ್. ರಾಠೋಡ ಲಂಚ ಪಡೆದು ಆಡಳಿತ ಮಂಡಳಿ ನವೀಕರಿಸಿದ್ದಾರೆ. ಉಪ್ಪಲದಿನ್ನಿಯ ಸುಭಾಷ ಅಪ್ಪಾಸಾಹೇಬಗೌಡ ಪಾಟೀಲ ಮತ್ತು ಬಸನಗೌಡ ಶಿವನಗೌಡ ಪಾಟೀಲ ಈ ಕೃತ್ಯ ಎಸಗಲು ಸಹಕರಿಸಿದ್ದಾರೆ. ಈ ಬಗ್ಗೆ ವಿಚಾರಿಸಲು ಹೋದರೆ ಸಹಕಾರಿ ಸಂಘಗಳ ಉಪನಿಬಂಧಕರು ಹಾಗೂ ಕೇಸ್‌ವರ್ಕರ್ ಸಮರ್ಪಕವಾಗಿ ಉತ್ತರಿಸದ ಕಾರಣ ದೂರು ದಾಖಲಿಸಿದ್ದು, ಸೂಕ್ತ ಕ್ರಮ ವಹಿಸಬೇಕೆಂದು ರಮೇಶ ಬಸನಗೌಡ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net