

ಮಂಡ್ಯ: ನಗರದ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರಿಂದ ಆಯೋಜಿಸಿದ್ದ ಸಭೆಯಲ್ಲಿ ಕಂದಾಯ ಇಲಾಖೆ ವಿರುದ್ಧ ರೈತರು ಸಾಲು ಸಾಲು ದೂರು ಸಲ್ಲಿಸಿದರು.
ಸಭೆಯಲ್ಲಿ ಸುಮಾರು 83 ದೂರುಗಳು ಸಾರ್ವಜನಿಕರಿಂದ ಸಲ್ಲಿಕೆಯಾಯಿತು. ಈ ಪೈಕಿ ಬರೋಬರಿ 80 ದೂರು ತಾಲೂಕು ಕಚೇರಿ, ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ್ದವೇ ಆಗಿತ್ತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಜನರು ಇಲಾಖೆಯಲ್ಲಿ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ದೂರು ಸಲ್ಲಿಸಿದರು. ಮಾತ್ರವಲ್ಲದೆ ಈ ಬಗ್ಗೆ ಗಮನಹರಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.
ಪ್ರಮುಖವಾಗಿ ಬದುಕಿದ್ದರೂ ಮರಣ ಹೊಂದಿದ್ದಾರೆಂದು ನಕಲಿ ಖಾತೆ ಸೃಷ್ಟಿ ಜಮೀನು ಮಾರಾಟ ಮಾಡಿರುವುದು, ಖಾತೆ ಬದಲಾವಣೆ ಮಾಡಿಕೊಡಲು ನಿರ್ಲಕ್ಷೃ, ಅರ್ಜಿ ಹಾಗೂ ಶುಲ್ಕ ಕಟ್ಟಿದ್ದರೂ ಜಮೀನು ಅಳತೆ ಮಾಡದಿರುವುದು, ಪೌತಿ ಖಾತೆ ಮಾಡಲು ವಿಳಂಭ, ನರೇಗಾ ಯೋಜನೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದ ದೂರನ್ನು ಸಲ್ಲಿಸಲಾಯಿತು. ಅಂತೆಯೇ ಕೆಲ ಅಧಿಕಾರಿ, ಸಿಬ್ಬಂದಿಯ ಹೆಸರನ್ನು ನಮೂದಿಸಿ ತೊಂದರೆ ಕೊಡುತ್ತಿರುವ ಹಾಗೂ ಲಂಚವಿಲ್ಲದೇ ಕೆಲಸ ಮಾಡಿಕೊಡದಿರುವ ಬಗ್ಗೆ ತಿಳಿಸಲಾಗಿದೆ.
ಲೋಕಾಯುಕ್ತ ಎಸ್ಪಿ ಸಜಿತ್, ಡಿವೈಎಸ್ಪಿ ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಮೋಹನ್‌ರೆಡ್ಡಿ, ಪ್ರಕಾಶ್ ಇತರರಿದ್ದರು.