

ಮಂಡ್ಯ: ದಾಖಲೆ ಕೊಡುವಂತೆ ಅರ್ಜಿ ಸಲ್ಲಿಸಿದರೆ ಲಭ್ಯವಿಲ್ಲವೆಂದು ಹಿಂಬರಹ ಕೊಡುತ್ತಾರೆ, ಸುಳ್ಳು ದಾಖಲೆ ಸೃಷ್ಟಿಸಿ ಪೌತಿ ಖಾತೆ ಮಾಡಿಕೊಡಲು ಸಹಕರಿಸುತ್ತಾರೆ, ಹಣ ಕೊಟ್ಟರೆ ಯಾವ ದಾಖಲೆಯಾದರೂ ಸಲೀಸು, ಅಳತೆ ಮಾಡಲು ಮನವಿ ಕೊಟ್ಟರೆ ಸ್ಪಂದಿಸುವುದಿಲ್ಲ.
ಹೀಗೆ ಲೋಕಾಯುಕ್ತ ಪೊಲೀಸರ ಎದುರು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು. ನಗರದ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರಿಂದ ಆಯೋಜಿಸಿದ್ದ ಸಭೆಯಲ್ಲಿ ತಾಲೂಕು ಕಚೇರಿ, ಎಡಿಎಲ್‌ಆರ್, ಪಿಡಿಒಗಳ ವಿರುದ್ಧ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಮಂಡ್ಯ ತಾಲೂಕಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಭೆಯಲ್ಲಿ 22 ದೂರು ಸಲ್ಲಿಕೆಯಾದವು. ಈ ಪೈಕಿ 20 ದೂರು ತಾಲೂಕು ಕಚೇರಿ, ಪಿಡಿಒಗಳ ವಿರುದ್ಧವಾದರೆ, ಎರಡು ದೂರು ಎಡಿಎಲ್‌ಆರ್ ವಿರುದ್ಧವಾಗಿತ್ತು. ಮುಖ್ಯವಾಗಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು, ತಹಸೀಲ್ದಾರ್ ಕಚೇರಿಗೆ ದಾಖಲಾತಿಗೆ ಅರ್ಜಿ ಕೊಟ್ಟರೆ, ಏನು ಹುಡುಕದೇ ದಾಖಲೆ ಇಲ್ಲವೆಂದು ಹಿಂಬರಹ ಕೊಡುತ್ತಾರೆ. ನಕಲಿ ದಾಖಲೆ ಸೃಷ್ಟಿಸಿ ಪೌತಿ ಖಾತೆ ಮಾಡಿಕೊಡುವುದು, ಜಮೀನು ಅಳತೆ ಮಾಡುವಂತೆ ಅರ್ಜಿ ಸಲ್ಲಿಸಿ ಹಲವು ದಿನ ಕಳೆದರೂ ಕನಿಷ್ಟ ಸ್ಪಂದನೆ ನೀಡುವುದಿಲ್ಲವೆಂದು ಅಧಿಕಾರಿಗಳ ವಿರುದ್ಧ ದೂರು ನೀಡಲಾಯಿತು.
ಲೋಕಾಯುಕ್ತ ಡಿವೈಎಸ್‌ಪಿ ಎಚ್.ಟಿ.ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಆರ್.ಎಂ.ಮೋಹನ್‌ರೆಡ್ಡಿ, ಎಂ.ಜಯರತ್ನಾ, ಬಿ.ಪಿ.ಬ್ಯಾಟರಾಯಗೌಡ, ಸಿಬ್ಬಂದಿ ಮಹದೇವಸ್ವಾಮಿ, ನಂದಿನಿ, ಯೋಗೇಶ್ ಇದ್ದರು.
ಮೇಲಧಿಕಾರಿಗಳಿಗೆ ರವಾನೆ: ಸಾರ್ವಜನಿಕರು ಸಲ್ಲಿಸಿದ ದೂರನ್ನು ಸ್ವೀಕರಿಸಿ ಅವರಿಗೆ ಸಂಖ್ಯೆ ನೀಡಲಾಯಿತು. ಅಂತೆಯೇ ದೂರಿನ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗೆ ರವಾನಿಸಿ ಇದರ ಬಗ್ಗೆ ಕ್ರಮ ವಹಿಸಿ ವರದಿ ನೀಡುವಂತೆ ಸೂಚಿಸಲಾಯಿತು.
ಬದುಕಿದ್ದಾಗಲೇ ತಾಯಿಯ ಮರಣಪತ್ರ
ಸಭೆಯಲ್ಲಿ ಬಂದ ದೂರಿನ ಪೈಕಿ ಬದುಕಿರುವ ತಾಯಿಯ ಹೆಸರಿನಲ್ಲಿ ಮರಣ ಪತ್ರ ಪಡೆದುಕೊಂಡಿದ್ದ ಪ್ರಕರಣ ಸಲ್ಲಿಕೆಯಾಗಿದೆ. ತಾಲೂಕಿನ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿ ಮೃತಪಟ್ಟಿದ್ದಾರೆಂದು ಮರಣ ಪತ್ರ ಪಡೆದು, ಬಳಿಕ ಅದನ್ನು ಬಳಸಿ ಆಸ್ತಿಯನ್ನು ಮಾರಾಟ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂತು. ಈ ಸಂಬಂಧ ಆತನ ಸಹೋದರ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ನಕಲಿ ದಾಖಲೆ ಕೊಟ್ಟಿರುವ ಅಧಿಕಾರಿ ವಿರುದ್ಧವೂ ಕ್ರಮವಾಗಬೇಕೆಂದು ಮನವಿ ಮಾಡಿದರು. ಇನ್ನೊಂದು ಪ್ರಕರಣದಲ್ಲಿ ಸಿಎ ನಿವೇಶನವನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿರುವ ಬಗ್ಗೆ ದೂರು ಸಲ್ಲಿಸಲಾಯಿತು.