

ಗಂಗಾವತಿ: ಜನರಿಂದ ಅಹವಾಲು ಸ್ವೀಕರಿಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಿ, ದೂರುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಜನರಿಗೆ ಅನುಕೂಲವಾಗಲಿ ಎಂದು ಅಹವಾಲು ಸ್ವೀಕಾರ ಸಭೆ ಆಯೋಜಿಸಲಾಗುತ್ತಿದ್ದು, ತಾಲೂಕು ಮಟ್ಟದ ಅನುಷ್ಟಾನಾಧಿಕಾರಿಗಳಿಂದ ಇತ್ಯರ್ಥ ಪಡಿಸಲಾಗುವುದು ಎಂದರು.
ಅಧಿಕಾರಿಗಳು ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಅಹವಾಲುಗಳ ತ್ವರಿತ ವಿಲೇವಾರಿಗೆ ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿ ನೈರ್ಮಲೀಕರಣ, ಕುಡಿವ ನೀರು ಸೇರಿ ಮೂಲಸೌಲಭ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಂಗವಿಕಲರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಿ. ಹೆಚ್ಚಿನ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂಗವಿಕಲರ ಚಿಕಿತ್ಸೆಗೆ ಕ್ರಮವಹಿಸಿ. ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.
ಸಮಾಧಾನ ಚಿತ್ತ: ಅಹವಾಲು ಸಲ್ಲಿಕೆಗೆ ಬಂದ ಜನರನ್ನು ಒಬ್ಬೊಬ್ಬರನ್ನಾಗಿ ಸಭೆಗೆ ಕರೆದು ಸಮಾಧಾನಚಿತ್ತದಿಂದ ಸಮಸ್ಯೆ ಆಲಿಸಿದ್ದು, ಅನುಷ್ಟಾನಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕುಡಿವ ನೀರು, ಆರ್‌ಒಪ್ಲಾಂಟ್‌ಗಳ ದುರಸ್ತಿ, ವಸತಿ, ಚರಂಡಿ, ರಸ್ತೆ, ಸಾರಿಗೆ, ವೈಯಕ್ತಿಕ ಜಾಗದ ಸಮಸ್ಯೆ,
ಶಾಲಾಭಿವೃದ್ಧಿ ಕಾಮಗಾರಿ, ಉದ್ಯಾನ ಅಭಿವೃದ್ಧಿ, ಸ್ಮಶಾನಕ್ಕೆ ದಾರಿ, ಅಂಗವಿಕಲರ ಯುಡಿಐಡಿ ಕಾರ್ಡ್ ವಿತರಣೆ ಕೇಂದ್ರ ಕನಕಗಿರಿ ಹಾಗೂ ಕಾರಟಗಿಯಲ್ಲಿ ತೆರೆಯುವುದು ಸೇರಿ ಇತರ ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಿದರು.ಪ್ರತಿ ಮಂಗಳವಾರ ಆಯಾ ತಾಲೂಕಿನ ತಾಪಂಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತಿದ್ದು, ಕಾಲಮಿತಿಯೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.
ರಾಹುಲ್ ರತ್ನಂ ಪಾಂಡೆ
ಸಿಇಒ, ಜಿಪಂ. ಕೊಪ್ಪಳ