

ಮಂಡ್ಯ: ಒಕ್ಕಲಿಗ ಸಮುದಾಯದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಸೀತಾರಾಂ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೂರು ಸಲ್ಲಿಸಲಾಯಿತು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಸಂಪಳ್ಳಿ ಶಿವಶಂಕರ್ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯ ವಿಶಾಲ್ ರಘು ನೇತೃತ್ವದಲ್ಲಿ ನಗರದ ಜಿಲ್ಲಾ ಪೊಲೀಸ್ ಭವನಕ್ಕೆ ತೆರಳಿ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿ ಸೀತಾರಾಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು.
ವಿಶಾಲ್ ರಘು ಮಾತನಾಡಿ, ಒಕ್ಕಲಿಗ ಸಮಾಜದ ಬಗ್ಗೆ ಅಶ್ಲೀಲ ಪದ ಬಳಸಿ ಮಾತನಾಡಿದ್ದ ಸೀತಾರಾಂ ವಿರುದ್ಧ ಈಗಾಗಲೇ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಅಡಿಯಲ್ಲಿ ದೂರು ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಸೀತಾರಾಂ ಒಕ್ಕಲಿಗರ ಸಮಾಜವನ್ನು ಬಾಯಿಗೆ ಬಂದಂತೆ ಮಾತನಾಡಿರುವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಒಕ್ಕಲಿಗ ಸಮುದಾಯದ ಬಗ್ಗೆ ದೂರವಾಣಿ ಸಂಭಾಷಣೆಯಲ್ಲಿ ನಾಲಗೆ ಹರಿಬಿಟ್ಟ ಸೀತಾರಾಂ ಕೂಡಲೇ ಕ್ಷಮೆ ಕೇಳಬೇಕು. ಯಾವುದೇ ವ್ಯಕ್ತಿ ಯಾವುದೇ ಜನಾಂಗದ ಮೇಲೆ ಕೆಟ್ಟದಾಗಿ ಮಾತನಾಡಬಾರದು. ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಅಕ್ಕ, ತಂಗಿ ಹಾಗೂ ತಾಯಿ ಬಗ್ಗೆ ಗೊತ್ತಿಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗ ಮುಖಂಡರು ಇಂತಹ ವ್ಯಕ್ತಿ ವಿರುದ್ಧ ಕ್ರಮ ವಹಿಸಬೇಕು. ಪಕ್ಷದಲ್ಲಿ ಯಾವುದೇ ಸ್ಥಾನ ನೀಡಿದ್ದರೂ ಅದರಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು. ಈ ವೇಳೆ ಅನಾಹುತವಾದರೆ ಸರ್ಕಾರವೇ ಜವಾಬ್ದಾರಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರಮೇಶ್, ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಉಪಾಧ್ಯಕ್ಷ ಕೃಷ್ಣ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷೆ ನಾಗಮ್ಮ, ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಗೌರವಾಧ್ಯಕ್ಷ ಸಾತನೂರು ವೇಣುಗೋಪಾಲ್, ನಾರಾಯಣ, ಬೋರೇಗೌಡ, ಹೊಸಳ್ಳಿ ಚಂದ್ರು ಇತರರಿದ್ದರು.