ನಕಲಿ ಪತ್ರ ಬರೆದಿರುವವರ ವಿರುದ್ಧ ಕಾನೂನು ಕ್ರಮವಾಗಲಿ: ಗೃಹಸಚಿವರಿಗೆ ಶಾಸಕರಿಂದ ದೂರು

3
Published on

ಮಂಡ್ಯ: ಜಿಲ್ಲೆಯ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ರಾಜ್ಯ ಸರ್ಕಾರದ ತೇಜೋವಧೆಯಾಗುವಂತೆ ಸುಳ್ಳು ಆರೋಪ ಮಾಡಿ ನಕಲಿ ಸಹಿಯೊಂದಿಗೆ ರಾಜ್ಯಪಾಲರಿಗೆ ದೂರು ನೀಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕರು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಮಂಗಳವಾರ ದೂರು ನೀಡಲಾಗಿದೆ.

ಕೃಷಿ ಇಲಾಖೆ ಸಚಿವ ಸ್ಥಾನ ಅಂದರೆ ಅತ್ಯಂತ ಮಹತ್ವದ ಕೆಲಸ. ಅಂತೆಯೇ ಜವಾಬ್ದಾರಿಯನ್ನು ಚಲುವರಾಯಸ್ವಾಮಿ ಅವರು ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರಾದ ಅವರು ರೈತಪರವಾಗಿ ಅವಿರತವಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಅಲ್ಲದೆ ಯಾವುದೇ ದ್ವೇಷ ಇಲ್ಲದೆ ಪ್ರಾಮಾಣಿಕವಾಗಿ ಅವರು ಇಲಾಖೆಯ ಹೊಣೆಯನ್ನು ಬಹಳ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇದು ರೈತರಿಗೆ ನೇರವಾಗಿ ಸಂಬಂಧಪಟ್ಟ ಇಲಾಖೆ. ರೈತರೆಂದರೆ ನನ್ನ ಕುಟುಂಬ ಎಂದು ಅವರು ಆಗಾಗ ಹೇಳಿಕೊಳ್ಳುತ್ತಾ ಬಂದಿದ್ದಾರೆ. ಅಲ್ಲದೆ ನಮ್ಮ ಕಾಂಗ್ರೆಸ್ ಸರ್ಕಾರ ಸಹ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದೆಯೂ ಸಹ ಇಂತಹ ಹತ್ತಾರು ಯೋಜನೆಗಳನ್ನು ತಂದು ರೈತರಿಗೆ ಅನುಕೂಲ ಮಾಡಿಕೊಡುವ ಕನಸನ್ನು ಸಚಿವರು ಹೊಂದಿದ್ದಾರೆ. ಆದರೆ ಅವರ ಜನಪ್ರಿಯತೆ, ಏಳಿಗೆಯನ್ನು ಸಹಿಸದ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಪಿತೂರಿ ಕೆಲಸವನ್ನು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಯಾವೊಬ್ಬ ಕೃಷಿ ಅಧಿಕಾರಿಯು ಸಹ ಸಚಿವರ ವಿರುದ್ಧ ಈ ರೀತಿಯ ಪತ್ರ ಬರೆದಿಲ್ಲವೆಂದು ಸ್ಪಷ್ಟಪಡಿಸಿರುತ್ತಾರೆ. ಸಚಿವರ ಮೇಲೆ ವೃಥಾ ಲಂಚದ ಆರೋಪ ಮಾಡಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರವನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ಕೊಟ್ಟಿರುತ್ತಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಆದ್ದರಿಂದ ನಕಲಿ ಪತ್ರ ಸಲ್ಲಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹುಚ್ಚಪ್ಪ, ರಾಮಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ವಿಭಾಗ ಉಪಾಧ್ಯಕ್ಷ ರಮೇಶ್ ಬಾಬು, ಎಂಎಲ್‌ಸಿ ದಿನೇಶ್ ಗೂಳಿಗೌಡ, ಕೆಪಿಸಿಸಿ ಮಾಧ್ಯಮ ಸಂಯೋಜಕ ಜಿ.ಸಿ.ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net