ಇಬ್ಬರ ಮೇಲೆ ದೂರು, 7 ಜನರ ಬಂಧನ

gls meeting
ಗೊಳಸಂಗಿ ಗ್ರಾಮ ಪಂಚಾಯಿತಿಯಲ್ಲಿ ಡಿವೈವೈಎಸ್‌ಪಿ ಬಲ್ಲಪ್ಪ ನಂದಗಾಂವಿ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಯಿತು. ಸಿಪಿಐ ಅಶೋಕ ಚವ್ಹಾಣ, ಪಿಎಸ್‌ಐ ಯತೀಶ ಕೆ.ಎನ್. ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ ಮತ್ತು ಗ್ರಾಮದ ಪ್ರಮುಖರು ಇದ್ದರು.
Published on

ಗೊಳಸಂಗಿ: ಖಾಸಗಿ ಪ್ರೌಢಶಾಲೆಯ ವಿಷಯವೊಂದು ಗಂಭೀರ ಸ್ವರೂಪ ಪಡೆದುಕೊಂಡು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಘರ್ಷಣೆ ನಡೆದು ಇಬ್ಬರು ಗಾಯಗೊಂಡ ಘಟನೆ ಗೊಳಸಂಗಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಏನಿದು ಘಟನೆ..?

ಗೊಳಸಂಗಿ ಗ್ರಾಮದ ಖಾಸಗಿ ಪ್ರೌಢಶಾಲೆಯಲ್ಲಿ ವಿಶ್ರಾಂತಿ ನಂತರ ತರಗತಿ ಕೋಣೆಗೆ ತಡವಾಗಿ ಬಂದ ಕೆಲ ವಿದ್ಯಾರ್ಥಿಗಳನ್ನು ವಿಚಾರಿಸಿದ ಶಿಕ್ಷಕರು ಒಂದೆರಡು ಏಟು ಕೊಟ್ಟಿದ್ದಾರೆ. ಸುದ್ದಿ ತಿಳಿದ ಕೆಲ ಪಾಲಕರು ಬೆಂಬಲಿಗರೊಂದಿಗೆ ಶಾಲೆಗೆ ಆಗಮಿಸಿ ತಮ್ಮ ಮಕ್ಕಳಿಗೆ ಹೊಡೆದದ್ದನ್ನು ಪ್ರಶ್ನಿಸಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವ ಜತೆಗೆ ಥಳಿಸಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಮತ್ತೊಂದು ಗುಂಪು ಶಾಲಾ ಆವರಣಕ್ಕೆ ಬಂದು ಶಿಕ್ಷಕರ ಪರ ನಿಂತು ಮಾತಿನ ಚಕಮಕಿ ನಡೆಸಿದ್ದಾರೆ. ಕೂಡಲೇ ಶಾಲಾ ಆವರಣಕ್ಕೆ ಬಂದ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ ಕಳಿಸಿದ್ದಾರೆ.

ಬಳಿಕ ಪಕ್ಕದ ಮಹಾತ್ಮಗಾಂಧಿ ವೃತ್ತದಲ್ಲಿ ಗುಂಪು ಘರ್ಷಣೆ ಶುರುವಾಗಿ ಶ್ರೀಶೈಲಗೌಡ ಅಶೋಕಗೌಡ ಪರಮಗೊಂಡ (28) ಮತ್ತು ಶರಣಗೌಡ ಗಜೇಂಡಪ್ಪಗೌಡ ಪರಮಗೊಂಡ (25) ಎಂಬ ಯುವಕರನ್ನು ಒಂದು ಗುಂಪಿನ ಕೆಲವರು ಕಬ್ಬಿಣದ ರಾಡ್‌ನಿಂದ ಹೊಡೆದರೆನ್ನಲಾಗಿದೆ. ಘಟನೆಯಿಂದ ಇಬ್ಬರೂ ಯುವಕರು ತೀವ್ರ ಗಾಯಗೊಂಡಿದ್ದು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಳಿಕ ಒಂದು ಗುಂಪಿನ ಹಲವರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಶಿಸ್ತುಕ್ರಮ ಕೈಗೊಳ್ಳದಿದ್ದರೆ ಇಡೀ ಗ್ರಾಮದಲ್ಲಿ ಕ್ರಾಂತಿ ಕಿಡಿ ಹೊತ್ತಿಕೊಳ್ಳುವುದು ನಿಶ್ಚಿತ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಅಂದೇ ರಾತ್ರಿ ಗ್ರಾಪಂ ಕಚೇರಿಯಲ್ಲಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾಂವಿ ಅಧ್ಯಕ್ಷತೆಯಲ್ಲಿ ಸಿಪಿಐಗಳಾದ ಅಶೋಕ ಚವ್ಹಾಣ್, ಗುರುಶಾಂತ ದಾಶ್ಯಾಳ, ಪಿಎಸ್‌ಐ ಯತೀಶ ಕೆ.ಎನ್. ಅವರು ಗ್ರಾಮದ ಪ್ರಮುಖರು, ಯುವಕರೊಂದಿಗೆ ಶಾಂತಿಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಏತನ್ಮಧ್ಯೆ ಗ್ರಾಮದಲ್ಲಿ ಪೊಲೀಸರು ಸರ್ಪಗಾವಲು ಮುಂದುವರಿಸಿದ್ದು, ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

ಘರ್ಷಣೆಯಿಂದಾಗಿ ಒಂದು ಗುಂಪಿನಿಂದ 18 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ ಪರಿಶೀಲಿಸಿ 7 ಜನರನ್ನು ಬಂಧಿಸಲಾಗಿದೆ. ಇನ್ನೊಂದು ಗುಂಪಿನಿಂದ ಇಬ್ಬರ ಮೇಲೆ ದೂರು ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಅಶೋಕ ಚವ್ಹಾಣ ಸಿಪಿಐ ನಿಡಗುಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net