

ಮೈಸೂರು: ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಶನಿವಾರ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ನನ್ನ ಅನುಮತಿ ಇಲ್ಲದೆ ಡಿ.12 ರಂದು ಏಕಾಏಕಿ ನನ್ನ ಕಚೇರಿಗೆ ನುಗ್ಗಿದ ಸ್ನೇಹಮಯಿ ಕೃಷ್ಣ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ‘ನಾನು ಮುಖ್ಯಮಂತ್ರಿ ವಿರುದ್ಧ ದೂರು ನೀಡಿದ ವ್ಯಕ್ತಿ, ನಿಮಗೆ ತೊಂದರೆ ನೀಡುವುದು ನನಗೆ ದೊಡ್ಡ ವಿಚಾರ ಅಲ್ಲ’ ಎಂದು ಸ್ನೇಹಮಯಿ ಕೃಷ್ಣ ಬೆದರಿಕೆ ಒಡ್ಡಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನದ ಸೀರೆಗಳನ್ನು ನಾನು ಕದ್ದೊಯ್ದಿದ್ದೇನೆ ಎಂದು ಸ್ನೇಹಮಹಿ ಕೃಷ್ಣ ಯಾವುದೇ ಆಧಾರ ಇಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೂಪಾ ದೂರಿನಲ್ಲಿ ಒತ್ತಾಯಿಸಿದ್ದಾರೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.