

ವಿಜಯವಾಣಿ ಸುದ್ದಿಜಾಲ ಉಡುಪಿ
ಬಿಜೆಪಿ ಮುಖಂಡ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಮತ್ತು ಇನ್ನಿತರರ ವಿರುದ್ಧ ದ್ವೇಷದ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ ಆಗಸ್ಟ್ 19ರಂದು ಮಾಹಿತಿ ನೀಡಿದ್ದಾರೆ.
ಹಿಂದು ಧರ್ಮದ ನಾಯಕನನ್ನು ಅವಹೇಳನ ಮಾಡಿ, ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇಷ ಭಾವನೆ ಉಂಟು ಮಾಡಿದ್ದಾರೆ. ತಿಮರೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟ ವಸಂತ ಗಿಳಿಯಾರ್ ಎಂಬುವರ ಫೇಸ್ಬುಕ್ ಖಾತೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಮ್ಯಾಪ್ ಆಳವಡಿಸಿ ಅಲ್ಲಿರುವ ದೇವಸ್ಥಾನ ಮತ್ತು ಮಸೀದಿಗಳ ಬಗ್ಗೆ ಪೋಸ್ಟ್ ಹಾಕಿದ್ದರು. ಅದು ವಿಭಿನ್ನ ಧರ್ಮ, ಜಾತಿ ಹಾಗೂ ಸಮುದಾಯಗಳ ಮಧ್ಯೆ ಕೋಮು ಗಲಭೆ ಸೃಷ್ಟಿಸುವಂತಹ ಸಂಗತಿಯಾಗಿದೆ. ಅಲ್ಲದೆ, ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿಗೂ ಪ್ರಚೋದನೆ ನೀಡಿದ ಸಂದೇಶವಾಗಿದೆ. ಅದನ್ನು ಕೆಂಪು&ನೀಲಿ ಬಣ್ಣದಲ್ಲಿ ಗುರುತು ಮಾಡಿದ ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಮಂಗಳೂರಿನ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.9ರಂದು ಪ್ರಕರಣ ದಾಖಲಾಗಿರುತ್ತದೆ. ಅದೇಫೇಸ್ಬುಕ್ ಪೋಸ್ಟ್ಅನ್ನು ಕೋಟ ತಾಲೂಕಿನ ಶರತ್ ಶೆಟ್ಟಿ ವಡ್ಡರ್ಸೆ ಎಂಬವರು ರೀ ಪೋಸ್ಟ್ ಮಾಡಿದ್ದಾರೆ. ಅವರ ವಿರುದ್ಧವೂ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ ತಿಳಿಸಿದ್ದಾರೆ.