ಹನೂರು : ಅಪ್ರಾಪ್ತೆಯನ್ನು ಮದುವೆಯಾಗಿ ಗರ್ಭಿಣಿಯಾಗಲು ಕಾರಣವಾಗಿದ್ದ ಗಂಡ ಸೇರಿದಂತೆ ಐವರ ವಿರುದ್ಧ ಮಂಗಳವಾರ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತಾಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯ 16 ವರ್ಷದ ಅಪ್ರಾಪ್ತೆಯನ್ನು ಇದೇ ಗ್ರಾಮದ ಗಿರಿಮಂಜ (26) ಪ್ರೀತಿಸಿ ವಿವಾಹವಾಗಿದ್ದನು ಎನ್ನಲಾಗಿದೆ. ಮಂಗಳವಾರ ಈಕೆಯನ್ನು ಆರೋಗ್ಯ ತಪಾಸಣೆಗಾಗಿ ಸಮೀಪದ ದಿನ್ನಳ್ಳಿ ಆರೋಗ್ಯ ಉಪ ಕೇಂದ್ರಕ್ಕೆ ಕರೆತರಲಾಗಿತ್ತು. ಈ ವೇಳೆ ಇಲ್ಲಿನ ಸಿಬ್ಬಂದಿ ಪರೀಕ್ಷಿಸಿದಾಗ ಅಪ್ರಾಪ್ತೆ 2 ತಿಂಗಳ ಗರ್ಭಿಣಿಯಾಗಿರುವುದಾಗಿ ಬೆಳಕಿಗೆ ಬಂತು. ಈ ಬಗ್ಗೆ ವಿಚಾರ ತಿಳಿದು ತಾಲೂಕು ಕಾರ್ಮಿಕ ನಿರೀಕ್ಷಕ ಪ್ರಸಾದ್ ಅವರು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿ ಸೇರಿದಂತೆ ಅಪ್ರಾಪ್ತೆಯ ಚಿಕ್ಕಪ್ಪ ವಿಕ್ರಮ್, ತಾಯಿ ಸಣ್ಣತಾಯಿ, ತಂದೆ ನಾಗಮಾದ, ಆರೋಪಿಯ ತಾಯಿ ಮಣಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಅಪ್ರಾಪ್ತೆಯನ್ನು ಜಿಲ್ಲಾ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.
---------