

ದೊಡ್ಡಬಳ್ಳಾಪುರ: ಹಲ್ಲೆ ನಡೆದಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಮತ್ತು ಪೊಲೀಸ್ ಇಲಾಖೆಗೆ ಮಸಿ ಬಳಿಯಲು ಯತ್ನಿಸಿರುವ ಆರೋಪದಡಿ ನಟ ಪ್ರಥಮ್ ಹಾಗೂ ಲಾಯರ್ ಜಗದೀಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದೊಡ್ಡಬಳ್ಳಾಪುರ ಡಿವೈಎಸ್ಪಿ ಹಾಗೂ ಗ್ರಾಮಾಂತರ ಠಾಣೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ಯಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಕರವೇ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಂಗಳವಾರ ದೊಡ್ಡಬಳ್ಳಾಪುರ ಡಿವೈಎಸ್ಪಿ ರವಿ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರಿಗೆ ದೂರು ನೀಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಶಾಂತಿ ಸೌಹಾರ್ದವಿದ್ದು, ದೊಡ್ಡ ಉದ್ಯಮಗಳಿವೆ. ವಲಸೆ ಬಂದವರನ್ನು ಸ್ವಾಗತಿಸಿ ಅವರಿಗೆ ಕೆಲಸ ನೀಡಿ ರಸುತ್ತಿದೆ. ದಕ್ಷ ಪೊಲೀಸ್ ಅಧಿಕಾರಿಗಳು ಜನರ ರಕ್ಷಣೆ ಹಾಗೂ ಯಾವುದೇ ಗಲಾಟೆ ಆಗದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರಥಮ್ ಹಾಗೂ ಲಾಯರ್ ಜಗದೀಶ್ ಅವರು ಗೂಂಡಾಗಳಿಂದ ಪ್ರಾಣ ಬೆದರಿಕೆ ಎದುರಾಗಿದೆ ಎಂಬ ಅಪವಾದವನ್ನು ದೊಡ್ಡಬಳ್ಳಾಪುರ ಹಾಗೂ ಪೊಲೀಸ್ ಇಲಾಖೆ ಮೇಲೆ ಮಾಡಿರುವುದು ಖಂಡನೀಯ. ಹಾಗಾಗಿ ಪೊಲೀಸರು ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಮಾತನಾಡಿ, ಪ್ರಚಾರಕ್ಕೋಸ್ಕರ ಊರಿನ ಬಗ್ಗೆ ಕೆಟ್ಟದಾಗಿ ಅಥವಾ ಹಗುರವಾಗಿ ಮಾತನಾಡಿದರೆ ಅವರ ವಿರುದ್ಧ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.