ವಿದ್ಯಾರ್ಥಿಗೆ ಬೆತ್ತದಿಂದ ಹೊಡೆದ ಆರೋಪ : ಶಿಕ್ಷಕನ ವಿರುದ್ಧ ಪಾಲಕರಿಂದ ದೂರು

Published on

ಪುತ್ತೂರು ಗ್ರಾಮಾಂತರ: ಎಂಟನೇ ತರಗತಿಯ ವಿದ್ಯಾರ್ಥಿಗೆ ಅದೇ ಶಾಲೆಯ ಗಣಿತ ಶಿಕ್ಷಕರು ಬೆತ್ತದಿಂದ ಹೊಡೆದಿರುವುದಾಗಿ ಆರೋಪಿಸಿ ಸಂಪ್ಯ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ. ಅರಿಯಡ್ಕ ಗ್ರಾಮದ ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ 8ನೇ ತರಗತಿಯಲ್ಲಿ ಗಣಿತ ಬೋಧನೆ ಮಾಡುತ್ತಿದ್ದ ಶಿಕ್ಷಕ ಹರಿಪ್ರಸಾದ್ ಎಂಬುವರು ಸರಿಯಾಗಿ ಮಗ್ಗಿ ಹೇಳಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಯ ಕೈಗೆ ಬೆತ್ತದಿಂದ ಹೊಡೆದಿರುವುದಾಗಿ ಆರೋಪಿಸಲಾಗಿದೆ. ವಿದ್ಯಾರ್ಥಿಯನ್ನು ಹೆತ್ತವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಯ ಪಾಲಕರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

*ಆರೋಪಿ ಶಿಕ್ಷಕನ ಬಂಧನಕ್ಕೆ ಆಗ್ರಹ: ವಿದ್ಯಾರ್ಥಿಯ ಮೇಲೆ ಶಿಕ್ಷಕ ನಡೆಸಿರುವ ಹಲ್ಲೆ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಹಾಗೂ ಅರಿಯಡ್ಕ ಗ್ರಾಮ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆ ನೀಡಿರುವ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ , ಕೂಡಲೇ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net