ಸ್ನೇಹಮಯಿ ಕೃಷ್ಣ ವಿರುದ್ಧ ಎಂ.ಲಕ್ಷ್ಮಣ್ ದೂರು

mysore
Published on

ಮೈಸೂರು: ಸ್ನೇಹಮಯಿ ಕೃಷ್ಣ ಎಂಬ ರೌಡಿಶೀಟರ್ ಅವರನ್ನು ಗಡಿಪಾರು ಮಾಡಲು ಮತ್ತು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಕೋರಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ನಗರ ಪೊಲೀಸ್ ಆಯುಕ್ತರಿಗೆ ಶುಕ್ರವಾರ ದೂರು ನೀಡಿದ್ದಾರೆ.


ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರು ನಗರ ವ್ಯಾಪ್ತಿಯಲ್ಲಿ ಸುಮಾರು 17 ಕ್ರಿಮಿನಲ್ ಪ್ರಕರಣಗಳಿದ್ದು, ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲೂ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಭೂಮಿಗಳಿಗೆ ಸಂಬಂಧಪಟ್ಟ ವಿಚಾರ ಕೈಗೆತ್ತಿಕೊಂಡು ಭೂವಿವಾದ ಸೃಷ್ಟಿಸುವುದು, ಅಮಾಯಕ ಭೂಮಾಲೀಕರ, ಬಾಡಿಗೆದಾರರ, ಸಂಬಂಧಿಕರ ಆಸ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಭೂಮಿಯನ್ನು ಕಾನೂನುಬಾಹಿರವಾಗಿ ಹೆದರಿಸಿ ವಶ ಪಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.


ಇಲ್ಲಸಲ್ಲದ ಆರೋಪ ಮಾಡಿ ಅಮಾಯಕರ ವಿರುದ್ಧ ನ್ಯಾಯಾಲಯ, ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುವುದು ಮತ್ತು ಅವರಿಗೆ ಜೀವಬೆದರಿಕೆ ಹಾಕುವ ಪ್ರವೃತ್ತಿಯನ್ನು ಬೆಳಸಿಕೊಂಡಿರುತ್ತಾನೆ ಎಂಬುದನ್ನು ಪೊಲೀಸ್‌ವರದಿಗಳು ಹೇಳುತ್ತಿದೆ. ಈತ 2022-2023ನೇ ಸಾಲಿನಲ್ಲಿ ಆರ್‌ಟಿಇ ಅಡಿ 110 ಅರ್ಜಿಗಳನ್ನು ವಿವಿಧ ಇಲಾಖೆಗಳಿಗೆ ನೀಡಿ ದಾಖಲಾತಿ ಪಡೆದುಕೊಂಡಿರುತ್ತಾನೆ ಎಂದು ಪೊಲೀಸ್ ವರದಿ ಹೇಳುತ್ತಿದೆ. ಕೆಲ ಇಲಾಖೆಗಳ ನಕಲಿ ಸೀಲ್‌ಗಳನ್ನು ಇಟ್ಟುಕೊಂಡಿದ್ದು, ದಾಖಲೆ ತಿರುಚಿರುವುದೂ ಕಂಡು ಬಂದಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.


ಇವನ ವಿರುದ್ಧ ಸುಮಾರು 17 ಕ್ರಿಮಿನಲ್ ಪ್ರಕರಣಗಳು 10 ವರ್ಷದಿಂದ ಇವೆ. ಆದರೂ, ಸೆಕ್ಯೂರಿಟಿ ಕೇಸ್‌ಅನ್ನು 6 ತಿಂಗಳಿಗೊಮ್ಮೆ ಹಾಕಬೇಕಾಗಿರುವ ನಿಯಮವಿದ್ದರೂ ಹಾಕಿಲ್ಲ ಏಕೆ ? ಎಂದು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ.


ಈತನ ಪ್ರಚೋದನೆ, ಹಿಂಸೆಯಿಂದ ಮನನೊಂದು ಕುವೆಂಪುನಗರ ಠಾಣಾ ಸರಹದ್ದಿನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಜನರ ಹಿತದೃಷ್ಟಿಯಿಂದ ಹಾಗೂ ಪ್ರಮುಖವಾಗಿ ಇವನಿಂದ ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ಸ್ನೇಹಮಯಿ ಕೃಷ್ಣನ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net