

ಮಂಡ್ಯ: ಕೆರಗೋಡು ಗ್ರಾಮದ ಹನುಮಾನ್ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ರವಿಕುಮಾರ್ ಗಣಿಗ ಬೆಂಬಲಿಗರು ತನಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ರಾಜೇಶ್ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಮಾ.8ರಂದು ರಾತ್ರಿ 10.30ರ ಸುಮಾರಿಗೆ ಕೆರಗೋಡು ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಆಗಮಿಸಿದ ತಾಳೆಮೆಳೆದೊಡ್ಡಿಯ ರಾಜೇಶ್, ಕಲ್ಮಂಟಿದೊಡ್ಡಿಯ ಲೋಕೇಶ್ ಹನುಮಾನ್ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ರಾಜ್ಯದಲ್ಲಿ ತಮ್ಮ ಸರ್ಕಾರದ ಜತೆಗೆ ಕ್ಷೇತ್ರದಲ್ಲಿ ಶಾಸಕರಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕಿಸುತ್ತೇವೆ. ಹಿಂದೆ ಸಾಕಷ್ಟು ಇಂತಹ ಕೆಲಸವನ್ನು ಮಾಡಿದ್ದೇವೆ ಎಂದು ಧಮ್ಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಈ ಸಂಬಂಧ ಹಿತೈಷಿಗಳು ಹಾಗೂ ಕುಟುಂಬದವರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮವಾಗಿ ದೂರು ಸಲ್ಲಿಸುವುದಾಗಿ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಡವಾಗಿ ದೂರು ಕೊಡುತ್ತಿದ್ದೇನೆ. ಇನ್ನು ಮಾ.10ರಂದು ಕೆರಗೋಡು ಠಾಣೆಗೆ ದೂರು ಕೊಟ್ಟರೂ ಎಫ್‌ಐಆರ್ ದಾಖಲು ಮಾಡದೇ ಪೊಲೀಸರು ನಿರ್ಲಕ್ಷೃ ವಹಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ದೂರು ನೀಡುತ್ತಿದ್ದೇನೆ. ಒಂದು ವೇಳೆ ಪ್ರಭಾವಕ್ಕೆ ಒಳಗಾಗಿ ಕ್ರಮ ವಹಿಸದಿದ್ದರೆ ಮೇಲಧಿಕಾರಿಗಳು ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಯೋಗೇಶ್, ಬಾಲು, ವಿರೂಪಾಕ್ಷ, ಪುನೀತ್, ಮೋಹನ್‌ಕುಮಾರ್ ಇತರರಿದ್ದರು.