

ಮಂಡ್ಯ: ಅಧಿಕಾರಿಗಳು ಅನ್ಯಾಯವಾಗಿ ಹಣ, ಆಸ್ತಿ ಮಾಡಬಹುದು. ಆದರೆ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಜತೆಗೆ ಅವರ ಮಕ್ಕಳಿಗೂ ಒಳ್ಳೆಯದಾಗುವುದಿಲ್ಲ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಣ ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲ. ಮಕ್ಕಳಿಗಾಗಿ ಹಣ ಮಾಡುತ್ತಾರೆ. ಆದರೆ ಅವರು ಸತ್ತ ನಂತರ ಅದೇ ಮಕ್ಕಳು ಆಸ್ತಿಗಾಗಿ ಜಗಳವಾಡುತ್ತಾರೆ. ಅದೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ. ನಿಮ್ಮನ್ನು ಸಮಾಜ ಗುರುತಿಸುತ್ತದೆ ಎಂದರು.
ಭ್ರಷ್ಟಾಚಾರ ಕ್ಯಾನ್ಸರ್‌ಗಿಂತಲೂ ಮಹಾಮಾರಿ ಕಾಯಿಲೆ. ಒಂದು ವೇಳೆ ಕ್ಯಾನ್ಸರ್ ಕಾಯಿಲೆ ಹೊಂದಿರುವವರನ್ನು ಗುಣಪಡಿಸಬಹುದು. ಆದರೆ ಭ್ರಷ್ಟಾಚಾರ ಎಂಬ ಕಾಯಿಲೆ ಹೊಂದಿರುವವರನ್ನು ಗುಣಪಡಿಸಲಾಗುವುದಿಲ್ಲ. ಆದ್ದರಿಂದ ಅಧಿಕಾರಿಗಳು ಭ್ರಷ್ಟಚಾರ ಎಂಬ ಕಾಯಿಲೆಯಿಂದ ದೂರವಿರಿ. ಇಲ್ಲವಾದರೆ ಭಯದಲ್ಲಿ ಬದುಕುವ ಪರಿಸ್ಥಿತಿ ಬರಬಹದು. ನಮ್ಮ ದೇಶದ ಮಹಾನೀಯರು ಇಂದು ಬದುಕಿದ್ದರೆ ಭ್ರಷ್ಟಾಚಾರ ನೋಡಲಾಗದೇ ನೇಣು ಹಾಕಿಕೊಳ್ಳುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಕರ್ತವ್ಯ ನಿಭಾಯಿಸದಿದ್ದರೆ ಅನರ್ಹ ಎಂದು ಅಮಾನತ್ತು ಮಾಡಬಹುದು. ಅಧಿಕಾರಿಗಳ ವಿರುದ್ಧ ದೂರು ಬಂದಲ್ಲಿ ನೋಟಿಸ್ ಕಳುಹಿಸಲಾಗುವುದು. ಒಂದು ತಿಂಗಳಿನ ಗಡುವು ನಂತರವು ಕೆಲಸ ನಿರ್ವಹಿಸದೆ ಇದ್ದಲ್ಲಿ ಕರ್ತವ್ಯಲೋಪ ಎಂದು 6 ತಿಂಗಳು ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುವುದು ಎಂದು ಎಚ್ಚರಿಸಿದ ಅವರು, ಅಧಿಕಾರಿಗಳ ವಿರುದ್ಧ ಸುಳ್ಳು ದೂರು ಬಂದಲ್ಲಿ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸೈನಿಕರು ಒಂದು ಕ್ಷಣವು ಚಿಂತಿಸದೆ ದೇಶಕ್ಕಾಗಿ ಪ್ರಾಣವನ್ನೇ ತೊರೆದು ಬಿಡುತ್ತಾರೆ. ನಾವು ಅವರಂತೆ ಜೀವಿಸಲು ಅಸಾಧ್ಯವಾದರೂ ಕನಿಷ್ಟ ಭ್ರಷ್ಟಾಚಾರವನ್ನಾದರೂ ವಿರೋಧಿಸಿ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡೋಣ. ಸಂವಿಧಾನದ ಹಕ್ಕುಗಳನ್ನು ಪಡೆಯುವುದರ ಜತೆಗೆ ಕರ್ತವ್ಯವನ್ನು ಸಹ ಪಾಲಿಸಬೇಕು. ಹಕ್ಕುಗಳು ದೊರೆಯದೆ ಇದ್ದಲ್ಲಿ ಹೇಗೆ ಪ್ರಶ್ನಿಸುತ್ತಿರೋ, ಹಾಗೆಯೇ ನಿಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಹೇಳಿದರು.
ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ನುಡಿಯಂತೆ ಅಧಿಕಾರಿಗಳು ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ಭ್ರಷ್ಟಾಚಾರ ವಿರೋಧಿಯಾಗಿರು ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಳ್ಳ ಬೇಕಾಗಿದೆ. ರಾಜ್ಯದ ಪ್ರತಿ ಪ್ರಜೆಯು ಅನ್ಯಾಯ, ಭ್ರಷ್ಟಾಚಾರ ಹಾಗೂ ದುರಾಢಳಿತದ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡುವ ಅಧಿಕಾರ ಹೊಂದಿದ್ದಾರೆ. ಯಾರಿಗೂ ಹೆದರದೆ ಧೈರ್ಯವಾಗಿ ನಿಮ್ಮ ದೂರುಗಳನ್ನು ಯಾವ ಸಮಯದಲ್ಲಾದರೂ, ಯಾವ ಸಂದರ್ಭದಲ್ಲಾದರೂ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಸಲ್ಲಿಸಿ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಲೋಕಾಯುಕ್ತ ಅಪರ ನಿಬಂಧಕರಾದ ಶ್ರೀನಿವಾಸ್, ಅರವಿಂದ, ಮಿಲನಾ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್‌ಬಾಬು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇತರರಿದ್ದರು.