

ಹುಬ್ಬಳ್ಳಿ: ಸನಾತನ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಐಪಿಸಿ ಸೆಕ್ಷನ್ 153 ಎ, 153 ಬಿ, 295ರಡಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನಗರದ ವಕೀಲ ಗಣೇಶ ಜಿತೂರಿ ಅವರು ಉಪನಗರ ಠಾಣೆಗೆ ದೂರು ನೀಡಿದ್ದಾರೆ.
ತಮಿಳುನಾಡಿನಲ್ಲಿ ಆಯೋಜಿಸಿದ್ದ ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಭೆಯಲ್ಲಿ ಸಚಿವ ಸ್ಟಾಲಿನ್ ವಿಷಕಾರಿ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮವನ್ನು ಡೆಂಘೆ, ಮಲೇರಿಯಾ, ಕರೊನಾ ಸೋಂಕಿಗೆ ಹೋಲಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡುತ್ತಿದ್ದಾರೆ. ಕೋಮುಸೌಹಾರ್ದ ಪ್ರಚೋದಿಸಿದ್ದಾರೆ. ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿದ್ದಾರೆ.
ಉದಯನಿಧಿ ಸ್ಟಾಲಿನ್ ವಿರುದ್ಧ ಕೂಡಲೇ ಕಠಿಣ ಕಾನೂನು ಜರಗಿಸಬೇಕೆಂದು ಇಲ್ಲಿನ ಉಪನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಹೊಸುರ ಅವರಿಗೆ ಗಣೇಶ ಜಿತೂರಿ ದೂರು ಕೊಟ್ಟಿದ್ದಾರೆ.
ಹಿಂದು ಜಾಗರಣ ವೇದಿಕೆ ಸಂಚಾಲಕ ವಿಶ್ವನಾಥ ಬೂದೂರ, ಪ್ರಮುಖರಾದ ಸು. ಕೃಷ್ಣಮೂರ್ತಿ, ಶ್ರೀಧರ ಕಲಬುರ್ಗಿ, ಯಶೋಧಾ ತಾಂಬೆ ಇತರರು ಇದ್ದರು.