

ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಲಮುರಿ ರಸ್ತೆ ಬಳಿ ಇರುವ ವರುಣ ಉಪನಾಲೆಗೆ ಸೇರಿದ 14 ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಲೇಔಟ್ ನಿರ್ಮಾಣ ಮಾಡಿದ ಮಾಲೀಕನ ವಿರುದ್ಧ ರಾಜಸ್ವ ನಿರೀಕ್ಷಕ ಸಿ.ಬಸವರಾಜು ಕೆ.ಆರ್.ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಾದ ಬೆನ್ನ ಹಿಂದೆಯೇ, ವರುಣ ಉಪನಾಲೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಲೇಔಟ್ ನಿರ್ಮಾಣಕ್ಕೆ ಭೂಮಿ ಅನ್ಯಕ್ರಾಂತ ಮಾಡಿಕೊಡಲು ಸಹಕರಿಸಿದ ಹಿಂದಿನ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ, ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಶಾಖೆಯ ಸಹಾಯಕ ನಿರ್ದೇಶಕ ಬಾಲಗಂಗಾಧರ ಅವರ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ವರದಿ ನೀಡುವಂತೆ ಶ್ರೀರಂಗಪಟ್ಟಣ ತಹಸೀಲ್ದಾರ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಬೆಳಗೊಳ ಗ್ರಾಮದ ಬಳಿ ಸರ್ವೇ ನಂ.44ಕ್ಕೆ ಸೇರಿದ 2.13 ಎಕರೆ ಪೈಕಿ 1990ರಲ್ಲಿ ಕಾವೇರಿ ನೀರಾವರಿ ನಿಗಮ 14 ಗುಂಟೆ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಿ ವರುಣ ಉಪನಾಲೆ ನಿರ್ಮಿಸಿತ್ತು. ಇದನ್ನು ಮರೆಮಾಚಿದ ಭೂಮಾಲೀಕ ವೀರಭದ್ರಯ್ಯ ಸಂಬಂಧ ಪಟ್ಟ ಕಂದಾಯ ಇಲಾಖೆ ಅಧಿಕಾರಿ ಜೊತೆ ಶಾಮೀಲಾಗಿ ಅನ್ಯಕ್ರಾಂತ ಮಾಡಿಸಿಕೊಂಡು ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಿದ್ದರು.
ಈ ಸಂಬಂಧ ಮೈಸೂರಿನ ವಕೀಲ ಮಹೇಶ್ ಲೋಕಾಯುಕ್ತಕ್ಕೆ ಈ ಹಿಂದೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾವೇರಿ ನೀರಾವರಿ ನಿಗಮದ ವರುಣ ನಾಲೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ಇತರ ಅಧಿಕಾರಿಗಳ ತಂಡವನ್ನು ರಚಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಇದೀಗ ರಾಜಸ್ವ ನಿರೀಕ್ಷಕರು ಲೇಔಟ್ ಮಾಲೀಕನ ವಿರುದ್ಧ ಕಳೆದ ಡಿ.8ರಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ವರುಣ ಉಪನಾಲೆಗೆ ಸೇರಿದ ಭೂಮಿಯನ್ನು ವ್ಯಕ್ತಿಯೊಬ್ಬರು ಅನ್ಯಕ್ರಾಂತ ಮಾಡಿಕೊಂಡು ಲೇಔಟ್‌ಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸೋಮವಾರ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಭಾಸ್ಕರ್, ಕಾರ್ಯಪಾಲಕ ಇಂಜಿನಿಯರ್, ವರುಣ ನಾಲಾ ವಿಭಾಗ, ಮೈಸೂರು