ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪ; ಶಿವಾನಂದ ಪಾಟೀಲರ ವಿರುದ್ಧ ವರಿಷ್ಠರಿಗೆ ದೂರು|Complaint

mb patil
Published on

ಬೆಂಗಳೂರು: ಮಹಮದ್ ಪೈಗಂಬರ್ ವಿರುದ್ಧ ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಅವರು ಆಡಿದ್ದಾರೆನ್ನಲಾದ ಮಾತುಗಳ ವಿರುದ್ಧ ವಿಜಯಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸದ ಕಾರಣ ಮುಂದಿಟ್ಟು ಸಚಿವ ಶಿವಾನಂದ ಪಾಟೀಲರು ಮುಸ್ಲಿಂ ಸಮುದಾಯದ ಮುಂದೆ ನನ್ನನ್ನು ಖಳನಾಯಕನಾಗಿ ಬಿಂಬಿಸಲು ಯತ್ನಿಸಿದ್ದಾರೆ(They tried to portray me as a villain in front of the Muslim community) ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ(M B Patil) ಆರೋಪಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಸಹೋದರ ಮತ್ತು ಎಂ.ಎಲ್.ಸಿ ಸುನೀಲ ಪಾಟೀಲ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ. ನಾನು ಆ ಸಮುದಾಯದವರಿಗೆ ತಿಳಿಸಿಯೇ ಬೆಳಗಾವಿಯಲ್ಲಿದ್ದ ಪಕ್ಷದ ಬೃಹತ್ ಪ್ರತಿಭಟನಾ ಸಭೆಗೆ ಹೋಗಿದ್ದೆ. ಆದರೂ ಸಚಿವ ಶಿವಾನಂದ ಪಾಟೀಲರು ನನ್ನ ಹೆಸರನ್ನು ಎಳೆದು ತಂದಿರುವುದರ ಹಿಂದೆ ದುರುದ್ದೇಶ ಅಡಗಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು, ಪಕ್ಷದ ವರಿಷ್ಟರ ಗಮನಕ್ಕೆ ತರಲಾಗುವುದು ಎಂದರು.

’ನಾನು ಮತ್ತು ನನ್ನ ಸಹೋದರ ಇಬ್ಬರೂ ಒಂದೇ ಪಕ್ಷದಲ್ಲಿದ್ದೇವೆ. ಬೇರೆಯವರಂತೆ ನಾಲ್ಕು ಮಂದಿ ಇಲ್ಲಿ, ನಾಲ್ಕು ಮಂದಿ ಬೇರೊಂದು ಪಕ್ಷದಲ್ಲಿ ಇಲ್ಲ. ವಿಜಯಪುರದ ರಾಜಕೀಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯದ ಅವಕಾಶ ಕೊಟ್ಟ ಕೀರ್ತಿಯು ನಮ್ಮ ತಂದೆಯವರಿಗೆ ಸಲ್ಲುತ್ತದೆ. ಆದರೆ, ಶಿವಾನಂದ ಪಾಟೀಲರು ಬೇಕೆಂದೇ ನನ್ನನ್ನು ಆ ಸಮುದಾಯದ ಪಾಲಿಗೆ ಖಳನಾಯಕನಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ’ ಎಂದು ಅವರು ತಿರುಗೇಟು ನೀಡಿದರು.

’ಯತ್ನಾಳರನ್ನು ಹಾಡಿ ಹೊಗಳಿ ಬೆಳೆಸಿದ್ದೇ ಇವರು. ಇವರೆಲ್ಲ ಈಗ ನನ್ನ ವಿರುದ್ಧ ಕುಟುಂಬ ರಾಜಕಾರಣದ ಮಾತನಾಡುತ್ತಿದ್ದಾರೆ. ಯಾವ್ಯಾವ ಸಂಸ್ಥೆಗಳಲ್ಲಿ ಯಾವ್ಯಾವ ಕುಟುಂಬಗಳ ಎಷ್ಟೆಷ್ಟು ಜನರಿದ್ದಾರೆ ಎನ್ನುವುದು ಈಗ ಜಗತ್ತಿಗೇ ಗೊತ್ತಿದೆ. ಶಿವಾನಂದ ಪಾಟೀಲರು ಮತ್ತು ನಾನು ಹಿಂದೆ ಬೇರೆಬೇರೆ ಪಕ್ಷಗಳಲ್ಲಿದ್ದೆವು. ಈಗ ಒಂದೇ ಪಕ್ಷದಲ್ಲಿದ್ದೇವೆ. ಆದ್ದರಿಂದ ಇಂತಹ ಕ್ಷುಲ್ಲಕ ರಾಜಕಾರಣ ಮಾಡಬಾರದು. ಇಬ್ಬರೂ ಸೇರಿ ಪಕ್ಷ ಕಟ್ಟುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಜಾತಿ ಗಣತಿ 6 ತಿಂಗಳಲ್ಲಿ ಮುಗಿಯಲಿ

ಕೇಂದ್ರ ಸರ್ಕಾರವು ಜಾತಿ ಗಣತಿಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಇದನ್ನು ಆರು ತಿಂಗಳಲ್ಲಿ ಮುಗಿಸಬೇಕು ಎನ್ನುವುದು ನಮ್ಮ ಷರತ್ತು. ಕೇವಲ ಬಿಹಾರ ಚುನಾವಣೆಯ ಮೇಲೆ ಕಣ್ಣಿಟ್ಟು ಜಾತಿ ಗಣತಿಗೆ ತೀರ್ಮಾನಿಸಿರುವಂತಿದೆ ಎಂದು ಅಭಿಪ್ರಾಯಪಟ್ಟರು.

ಜಾತಿ ಗಣತಿಗೆ ಕಾಂಗ್ರೆಸ್ ಮೊದಲಿನಿಂದಲೂ ಒತ್ತಾಯಿಸುತ್ತಲೇ ಇತ್ತು. ಆದರೆ, ಮೋದಿ ನೇತೃತ್ವದ ಸರ್ಕಾರ ಹನ್ನೊಂದು ವರ್ಷಗಳಿಂದಲೂ ಇದನ್ನು ತಳ್ಳಿಹಾಕುತ್ತಲೇ ಇತ್ತು. ಈಗ ದಿಢೀರನೇ ಜಾತಿ ಗಣತಿಗೆ ಮನಸ್ಸು ಮಾಡಿರುವುದರ ಹಿಂದೆ ಸದುದ್ದೇಶವಂತೂ ಇಲ್ಲ ಎಂದು ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net