

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನನ್ನ ಮೇಲೆ ಕೇಸು ದಾಖಲಿಸಲು ರಾಜ್ಯ ಸರ್ಕಾರ ಉದ್ಯಮಿ ವಿಜತ್ ತಾತಾ ಅವರನ್ನು ಬಳಸಿಕೊಂಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ ದೂರಿದರು.
ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಕಚೇರಿ, ಕೆಲವು ಸಚಿವರು ತಾತಾ ಅವರ ಮೇಲೆ ಒತ್ತಡ ಹೇರಿ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಠಾಣೆಯಲ್ಲಿ ಸ್ವತಃ ವಿಜಯ್ ತಾತಾನೇ ನನಗೆ ಹೇಳಿದ್ದಾರೆ. ಕುಮಾರಸ್ವಾಮಿ ಮತ್ತು ನಿಮ್ಮ ಮೇಲೆ ಕೇಸು ದಾಖಲಿಸಲು ನನ್ನ ಮೇಲೆ ಸಿಎಂ ಕಚೇರಿ ಹಾಗೂ ಕೆಲ ಸಚಿವರ ಒತ್ತಡ ಇದೆ ಎಂದು ಹೇಳಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಿ ಎಂದು ಒತ್ತಾಯಿಸಿದರು.
ವಂಚಕ ವಿಜಯ್ ತಾತಾನಿಂದ ಅನೇಕರಿಗೆ ಮೋಸವಾಗಿದ್ದು, ಮೋಸ ಹೋದವರಿಗೆ ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ. ಶರವಣ, ಜವರಾಯಿಗೌಡ ಸೇರಿ ಪಕ್ಷದ ವಿವಿಧ ಮುಖಂಡರ ಜತೆ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಅನೇಕರಿಗೆ ವಿಜಯ್ ತಾತಾ ಮೋಸ ಮಾಡಿದ್ದಾನೆ. ಆತನ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ವಂಚನೆಯೇ ಆತನ ಪ್ರವೃತ್ತಿ ಆಗಿದ್ದು, ವಿಶೇಷ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಪೊಲೀಸ್ ಆಯುಕ್ತರಿಗೆ ನಾನು ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.
ವಿಜಯ್ ತಾತಾ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲ, ನಾಗಪುರ, ಪುಣೆ, ಮುಂಬಯಿಯಲ್ಲೂ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನೂರಾರು ಎ್ಐಆರ್‌ಗಳು ಆಗಿವೆ ಎಂದು ಹೇಳಿದರು.
ನಾನು ದೂರು ಕೊಟ್ಟರೆ ಎ್ಐಆರ್ ದಾಖಲಾಗುವುದಿಲ್ಲ. ಆತ ದೂರು ಕೊಟ್ಟರೆ ಆಗುತ್ತದೆ. ಪೊಲೀಸ್ ಠಾಣೆ ಮುಂದೆ ಧರಣಿ ಕೂರುತ್ತೇನೆ. ನಾನು ಪ್ರಮಾಣ ಮಾಡುತ್ತೇನೆ. ನಾನು ವಿಜಯ್ ತಾತಾ ಬಳಿ ಯಾವುದೇ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯ್ ತಾತಾ ವಿರುದ್ಧ ನಾನು ದೂರು ಕೊಟ್ಟಿದ್ದರೂ ಎ್ಐಆರ್ ಮಾಡದಿರುವ ಪೊಲೀಸರ ಕ್ರಮ ಖಂಡಿಸಿ ರಮೇಶ್ ಗೌಡ ಮತ್ತಿತರೆ ಮುಖಂಡರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.