

ಬೆಂಗಳೂರು: ಮಹಾನಗರದಲ್ಲಿ ಪ್ರವಾಹ ಸಂಕಷ್ಟ ನಿವಾರಣೆಗಾಗಿ ಬಿಬಿಎಂಪಿ ರೂಪಿಸಿರುವ ಬೃಹತ್ ನೀರುಗಾಲುವೆಗಳ ನಿರ್ಮಾಣ ಹಾಗೂ ಪುನರುಜ್ಜೀವನ ಯೋಜನೆ ಜಾರಿಗೆ ಸಲ್ಲಿಕೆಯಾಗಿರುವ 426 ದಶಲಕ್ಷ ಡಾಲರ್ ಮೊತ್ತದ ಸಾಲವನ್ನು ಮಂಜೂರು ಮಾಡದಂತೆ ವಿಶ್ವಬ್ಯಾಂಕಿನ ಭಾರತ ವಿಭಾಗದ ಪ್ರಾದೇಶಿಕ ನಿರ್ದೇಕರಿಗೆ ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಪತ್ರ ಬರೆದು ಒತ್ತಾಯಿಸಿದೆ.
ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಅಡಿಯಲ್ಲಿ ಪಾಲಿಕೆಯು ವಿಶ್ವಬ್ಯಾಂಕ್‌ನಿಂದ 426 ದಶಲಕ್ಷ ಡಾಲರ್ (ಅಂದಾಜು 4 ಸಾವಿರ ಕೋಟಿ ರೂ.) ಮೊತ್ತದ ಸಾಲ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಕೆಲವೊಂದು ಷರತ್ತು ವಿಧಿಸಿ ತಾತ್ವಿಕ ಒಪ್ಪಿಗೆ ಅನುಮೋದನೆ ಪಡೆಯಲಾಗಿದೆ. ಆದರೆ, ಪಾಲಿಕೆಯಲ್ಲಿ ಇಂತಹ ಬೃಹತ್ ಮೊತ್ತದ ಯೋಜನೆ ನಿರ್ವಹಿಸಲು ಹಣಕಾಸು ವಿಭಾಗ ಸಾಮರ್ಥ್ಯ ಹೊಂದಿಲ್ಲ. ಯೋಜನೆ ಅಗತ್ಯತೆ ಬಗ್ಗೆಯೂ ಸಮರ್ಪಕ ಮಾಹಿತಿ ಕ್ರೋಡೀಕರಣವಾಗಿಲ್ಲ. ಬೃಹತ್ ಸಾಲ ಪಡೆದು ಮರುಪಾವತಿಸಲು ಪಾಲಿಕೆಗೆ ಆರ್ಥಿಕ ಕೊರತೆ ಕಾಡುತ್ತಿದೆ. ಹೀಗಾಗಿ ಯೋಜನೆಗೆ ದೊಡ್ಡ ಮೊತ್ತವನ್ನು ಬಿಡುಗಡೆ ಮಾಡಬಾರದು ಎಂದು ಟ್ರಸ್ಟಿನ ವ್ಯವಸ್ಥಾಪಕಿ ಟ್ರೆಸ್ಟಿ ಎಸ್.ಅಮರೇಶ್ ಪತ್ರ ಬರೆದು ಮಂಗಳವಾರ ಆಗ್ರಹಿಸಿದ್ದಾರೆ.
ಪ್ರಸ್ತುತ ಬಿಬಿಎಂಪಿ ಪ್ರತೀವರ್ಷ ಮಳೆನೀರುಗಾಲುವೆ ನಿರ್ವಹಣೆಗೆ 2,000 ಕೋಟಿ ರೂ. ಹಾಗೂ ಹೂಳೆತ್ತಲು 500 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ಮಳೆನೀರುಗಾಲುವೆ ಯೋಜನೆ ಕಾರ್ಯಗತವಾಗಿಲ್ಲ. ಜತೆಗೆ ಈ ಹಿಂದೆ ಕೈಗೆತ್ತಿಕೊಂಡಿದ್ದ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿದ್ದು, ರಾಜ್ಯ ಆರ್ಥಿಕ ಇಲಾಖೆ ಕೈಗೊಂಡಿರುವ ಆಡಿಟ್ ವರದಿಯಲ್ಲಿ 12 ಸಾವಿರ ಕೋಟಿ ರೂ. ದುರುಪಯೋಗದ ಮಾಹಿತಿ ನೀಡಿದ್ದು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ 5 ಸಾವಿರ ಕೋಟಿ ರೂ. ವಸೂಲಾತಿಗೆ ನಿರ್ದೇಶಿಸಿದೆ. ಇದು ಈವರೆಗೂ ಜಾರಿಯಾಗದೆ ಕಾಗದಲ್ಲೇ ಉಳಿದಿದೆ. ಈ ಮೊತ್ತವನ್ನು ವಸೂಲು ಮಾಡಿ ಕಾಮಗಾರಿಗಳಿಗೆ ಬಳಸಲು ಅವಕಾಶ ಇರುವುದರಿಂದ ಸಾಲ ಮಾಡುವ ಪ್ರಮೇಯ ಬಾರದು ಎಂದು ಅವರು ತಿಳಿಸಿದರು.
ಐಎಎಸ್ ಅಧಿಕಾರಿಗೆ ಹೊಣೆ ಏಕಿಲ್ಲ?:
ವಿಶ್ವಬ್ಯಾಂಕ್‌ನಿಂದ ಪಡೆಯುವ 4 ಸಾವಿರ ಕೋಟಿ ರೂ. ಮೊತ್ತದ ಬೃಹತ್ ಸಾಲದ ಯೋಜನೆ ನಿರ್ವಹಿಸಲು ಐಎಎಸ್ ಅಧಿಕಾರಿ ನೇಮಿಸಬೇಕಿತ್ತು. ಆದರೆ, ಪಾಲಿಕೆಯ ಪ್ರಧಾನ ಇಂಜಿನಿಯರ್‌ಗೆ ಉದ್ದೇಶಪೂರಿತವಾಗಿ ಹೊಣೆ ವಹಿಸಲಾಗಿದೆ. ಇದೇ ಅಧಿಕಾರಿ ಇತ್ತೀಚಿಗೆ ದೆಹಲಿಯಲ್ಲಿ ನಡೆದ ವಿಶ್ವಬ್ಯಾಂಕ್ ಸಾಲ ಮಂಜೂರಾತಿ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಅಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ಗುರುತರ ಆರೋಪ ಹಾಗೂ ಪ್ರಕರಣಗಳು ದಾಖಲಾಗಿದ್ದರೂ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲು ಹವಣಿಕೆ ಮಾಡಿದಂತಿದೆ ಎಂದು ಎಸ್.ಅಮರೇಶ್ ಆರೋಪಿಸಿದರು.