

ಮಂಡ್ಯ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅವಾಚ್ಯವಾಗಿ ನಿಂದಿಸಿರುವ ನಟ ದರ್ಶನ ಅಭಿಮಾನಿ ಮಂಗಳಾ ಎಂಬುವವರ ವಿರುದ್ಧ ಜೆಡಿಎಸ್ ಮುಖಂಡರು ನಗರದ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದರು.
ಕುಮಾರಸ್ವಾಮಿ ಅವರಿಗೆ ಅವಾಚ್ಯವಾಗಿ ನಿಂದಿಸಿ ಅಪಮಾನ ಮಾಡಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುಮಾರಸ್ವಾಮಿ ಹಾಗೂ ದರ್ಶನ್‌ಗೆ ಯಾವುದೇ ಸಂಬಂಧ ಇಲ್ಲ. ದರ್ಶನ್ ಪ್ರಕರಣದಲ್ಲಿ ಎಚ್‌ಡಿಕೆ ಅವರ ಹೆಸರು ಸೇರಿಸುವುದು ಸರಿಯಲ್ಲ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಹೆಸರನ್ನು ಎಳೆದುತಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿರುವುದರಿಂದ ಜೆಡಿಎಸ್ ಕಾರ್ಯಕರ್ತರಿಗೆ, ಮುಖಂಡರಿಗೆ ನೋವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಬಂಧಿಸಿದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಗರಸಭೆ ಸದಸ್ಯ ನಾಗೇಶ, ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ, ಮುಖಂಡರಾದ ವಸಂತ್‌ರಾಜು, ಬೂದನೂರು ಸ್ವಾಮಿ, ಮಾಚಗೌಡನಹಳ್ಳಿ ಮೋಹನ, ವರದರಾಜು, ರಾಕೇಶ್ ಭಾಗವಹಿಸಿದ್ದರು.