

ತುಮಕೂರು: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯ್ಕ ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರುನ್ನು (ಪಿಸಿಆರ್) ದಾಖಲಿಸಿದ್ದಾರೆ.
ಸಂಸತ್‌ನಲ್ಲಿ ಕೃಷಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ‘ಭಯೋತ್ಪಾದಕರು’ ಎಂದು ಕಂಗನಾ ಟ್ವೀಟ್‌ನಲ್ಲಿ ನಿಂದಿಸಿದ್ದು ಲಕ್ಷಾಂತರ ರೈತರಿಗೆ ಅವಮಾನ ಮಾಡಿದ್ದಾರೆ. ಕಂಗನಾ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪಿಸಿಆರ್ ಕ್ರಿಮಿನಲ್ ದೂರನ್ನು ರಮೇಶ್ ಶುಕ್ರವಾರ ಮಧ್ಯಾಹ್ನ ದಾಖಲಿಸಿದ್ದಾರೆ.
ಕಂಗನಾ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದ ರಮೇಶ್, ಪೊಲೀಸರು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಅನುಮತಿಗೆ ಕೋರಿದ್ದರು. ಶುಕ್ರವಾರ ಅನುಮತಿ ದೊರೆತ ಹಿನ್ನೆಲೆಯಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಕಂಗನಾ ರಣಾವತ್ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪಿಸಿಆರ್ ದಾಖಲಿಸಲಾಗಿದೆ. ಕೃಷಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ನಿಂದಿಸಿರುವುದು ಐಪಿಸಿ ಸೆಕ್ಷನ್ 44, 108, 153, 153ಎ ಹಾಗೂ 504ರ ಅಡಿ ಇದು ಶಿಕ್ಷಾರ್ಹ ಅಪರಾಧವಾಗಿದೆ. | ಎಲ್.ರಮೇಶ್ ನಾಯ್ಕ ಹೈಕೋರ್ಟ್ ವಕೀಲ