

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯಲ್ಲಿ ಒಂದೆಡೆ ಸಂಭ್ರಮದ ಗಣೇಶೋತ್ಸವ ನಡೆಯುತ್ತಿದ್ದರೆ ಇನ್ನೊಂದೆಡೆ ಕೈ-ಕಮಲ ನಾಯಕರ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ.
ಸೆ.6ರಂದು ಮಣಿಪಾಲದಲ್ಲಿ ಉಡುಪಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ನಡೆಸಿದ್ದ ಪ್ರತಿಭಟನೆ ಹಾಗೂ ಅವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿರುವುದು ರಾಜ್ಯ-ದೇಶ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಕುಂದಾಪುರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದರೆ, ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ನೀಡಿದ್ದ ಪ್ರಶಸ್ತಿಯನ್ನು ಸರ್ಕಾರ ಹಿಂಪಡೆದಿತ್ತು. ಇದು ಶಿಕ್ಷಕ ವಲಯಕ್ಕೆ ಆದ ಅಪಮಾನವೆಂದು ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಣಿಪಾಲದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಸೆ.6ರಂದು ಪ್ರತಿಭಟನೆ ನಡೆಸಿದ್ದರು.
ಹೆಬ್ರಿ ತಾಲೂಕಿನ ಶ್ರೀಶೈಲ, ಚಾರ ಗ್ರಾಮದ 24 ವರ್ಷದ ಸೌರಭ್ ಬಲ್ಲಾಳ್ ಎಂಬ ಯುವಕ, ಬಿಜೆಪಿಯವರು ಕೋಮುಗಲಭೆ ನಡೆಸುವ ಉದ್ದೇಶದಿಂದ ಪ್ರತಿಭಟನೆ ನಡೆಸಿದ್ದರು ಎಂದು ಸೆ.7ರಂದು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಬಿಜೆಪಿಯ 11 ಕಾರ್ಯಕರ್ತರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಅದೇ ವಿಚಾರವೀಗ ಉಡುಪಿ ಜಿಲ್ಲೆಯ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಪರ-ವಿರೋಧದ ಜಟಾಪಟಿ ನಡೆದಿದೆ.
ಮೂರು ವಾರದ ಹಿಂದೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಹೊರಡಿಸಿದ್ದ ಪ್ರಾಸಿಕ್ಯೂಷನ್ ಆದೇಶ ವಿರೋಧಿಸಿ ಕಾಂಗ್ರೆಸ್ ವಿಪ ಸದಸ್ಯ ಐವನ್ ಡಿ'ಸೋಜಾ ಮನ ಬಂದಂತೆ ಮಾತನಾಡಿದ್ದರು. ರಾಜ್ಯಪಾಲರು ಆದೇಶ ಹಿಂಪಡೆಯದಿದ್ದಲ್ಲಿ ಬಾಂಗ್ಲಾ ದೇಶದ ಪ್ರಧಾನಿಗೆ ಬಂದ ಪರಿಸ್ಥಿತಿ ಅವರಿಗೂ ಬರಬಹುದು ಎಂದು ದೇಶದ ಆಂತರಿಕ ಭದ್ರತೆ ದುರ್ಬಲಗೊಳಿಸುವ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೆವು. ಜಿಲ್ಲಾದ್ಯಂತ ಡಿಸೋಜಾ ವಿರುದ್ಧ ಹಲವು ದೂರು ದಾಖಲಾಗಿದ್ದರೂ ಯಾವುದೇ ಠಾಣೆಯಲ್ಲಿ ಒಂದೇ ಒಂದು ಎಫ್ ಐ ಆರ್ ದಾಖಲಾಗಿಲ್ಲ ಏಕೆ ಎಂದು ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಶಶಾಂಕ್ ಶಿವತ್ತಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ನೆಪದಲ್ಲಿ ಶಾಸಕರ ಸಮ್ಮುಖದಲ್ಲೇ ನಾಡಿನ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ, ಚಪ್ಪಲಿಯಿಂದ ಅವಮಾನ ಮಾಡಿದ ಉಡುಪಿ ಬಿಜೆಪಿ ಕಾರ್ಯಕರ್ತರ ಗೂಂಡಾ ವರ್ತನೆ ಖಂಡನೀಯ. ಜನರಿಂದ ಆಯ್ಕೆಯಾದ ಶಾಸಕ ಯಶಪಾಲ್ ಸುವರ್ಣ ಕೂಡಲೇ ಕ್ಷಮೆ ಯಾಚಿಸಬೇಕು. ರಾಜಕೀಯ ದುರುದ್ದೇಶದಿಂದ ಸಭ್ಯತೆ ಮೀರಿದ ಹಾಗೂ ದೂರಿನಲ್ಲಿ ಉಲ್ಲೇಖಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ಆಗ್ರಹಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತೇವೆ ಎನ್ನುವ ಕಾಂಗ್ರೆಸ್ಸಿನ ಮಾತುಗಳೆಲ್ಲ ಕೇವಲ ಬೊಗಳೆಯಾಗಿದೆ. ಮತೀಯವಾದಿಗಳ ಒತ್ತಡಕ್ಕೆ ಮಣಿದು ಶಿಕ್ಷಕರಿಗೆ ನೀಡಿದ ಪ್ರಶಸ್ತಿಯನ್ನು ಸರ್ಕಾರ ವಾಪಸ್ ಪಡೆದಿದೆ. ಅದನ್ನು ವಿರೋಧಿಸಿ ಪ್ರತಭಟಿಸಿದ ನಮ್ಮ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ತನ್ನ ವಿರುದ್ಧದ ಒಂದು ಪ್ರತಿಭಟನೆಯನ್ನೂ ಸಹಿಸಿಕೊಳ್ಳಲು ಆಗದ ನಿರಂಕುಶವಾದಿ ಮನಸ್ಥಿತಿ ಹೊಂದಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಸಹಿತ ಬಿಜೆಪಿ ಮುಖಂಡರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದಾಖಲಿಸಿರುವ ಪ್ರಕರಣ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ರಾಜ್ಯ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿದೆ.
ಜ್ಞಾನದ ಬೆಳಕು ನೀಡಿ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರ ಮೇಲೆ ಕಾಂಗ್ರೆಸ್ಗೆ ವಿಶೇಷ ಗೌರವ, ಅತೀವ ಕಾಳಜಿ ಇದೆ. ಆದರೆ, ಶಿಕ್ಷಕರ ಮೇಲೆ ಗೌರವದ ನೆಪದಿಂದ ಕಾನೂನಿಗೆ ವಿರುದ್ಧವಾಗಿ ಅನಾಗರಿಕ ರೀತಿಯಲ್ಲಿ ತಮ್ಮವರು ಪ್ರತಿಭಟಿಸಿದಾಗ ಶಾಸಕಾಂಗದ ಸದಸ್ಯನಾದ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ತಡೆಯಬೇಕಿತ್ತು. ಅನಾಗರಿಕ ವರ್ತನೆಯ ಪ್ರಕರಣದ ಮೂಲಕವೇ ರಾಜಕೀಯ ಪ್ರವರ್ಧಮಾನಕ್ಕೆ ಬಂದವರಿಗೆ ನೂರಾರು ಪೊಲೀಸ್ ಕೇಸ್ಗಳೇ ಶೋಭಾಯಮಾನವಾದಂತಿದೆ. | ರಮೇಶ್ ಕಾಂಚನ್. ಅಧ್ಯಕ್ಷ, ಉಡುಪಿ ಬ್ಲಾಕ್ ಕಾಂಗ್ರೆಸ್
ಜಿಲ್ಲೆಯ ಶಿಕ್ಷಕರಿಗಾದ ಅನ್ಯಾಯ ವಿರೋಧಿಸಿ ಪ್ರತಿಭಟಿಸಿದ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಧೋರಣೆಯಾಗಿದೆ. ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಕೈಗೊಂಬೆಯಾಗಿದ್ದು, ಪೊಲೀಸ್ ಠಾಣೆಗಳೂ ಕಾಂಗ್ರೆಸ್ ಕಚೇರಿಯಂತಾಗಿವೆ. ಶಿಕ್ಷಕರಿಗೆ ಪ್ರಶಸ್ತಿ ತಡೆ ಹಿಡಿದಿರುವ ಪ್ರಮಾದವನ್ನು ಸರ್ಕಾರ ತಕ್ಷಣ ಸರಿಪಡಿಸಬೇಕು. ಅನ್ಯಾಯದ ವಿರುದ್ಧ ಬಿಜೆಪಿಯ ಜನಪರ ಹೋರಾಟ ಎಂದಿಗೂ ನಿಲ್ಲದು. | ಕಿಶೋರಕುಮಾರ್ ಕುಂದಾಪುರ. ಬಿಜೆಪಿ ಜಿಲ್ಲಾಧ್ಯಕ್ಷ, ಉಡುಪಿ ಉಡುಪಿ ಜಿಲ್ಲೆಯು ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವ ಮಾನ್ಯತೆ ಪಡೆದಿದ್ದು, ಜಿಲ್ಲೆಯ ಯುವ ಸಮುದಾಯವನ್ನು ದೇಶದ ಆಸ್ತಿಯನ್ನಾಗಿಸುವ ಶಿಕ್ಷಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದ ಅಪಮಾನ ಸಹಿಸಲು ಸಾಧ್ಯವಿಲ್ಲ. ಮತೀಯ ಶಕ್ತಿಗಳ ಕುಮ್ಮಕ್ಕಿನಿಂದ ಶಿಕ್ಷಕರಿಗೆ ನೀಡಿದ್ದ ಪ್ರಶಸ್ತಿ ಹಿಂಪಡೆದು ಜಿಲ್ಲೆಯ ಶಿಕ್ಷಕರ ನೈತಿಕ ಸ್ಥೈರ್ಯ ಕುಗ್ಗಿಸಿದ ಶಿಕ್ಷಕರ ಜೊತೆ ಶಾಸಕನಾಗಿ ಸದಾ ನಿಲ್ಲುತ್ತೇನೆ. ನನ್ನ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ನೂರು ಕೇಸ್ ದಾಖಲಿಸಿದರೂ ಧೃತಿಗೆಡುವ ಪ್ರಶ್ನೆಯೇ ಇಲ್ಲ. | ಯಶ್ಪಾಲ್ ಸುವರ್ಣ. ಶಾಸಕ, ಉಡುಪಿ