ಉದ್ದೇಶಪೂರ್ವಕವಾಗಿ ಅಶಾಂತಿ ವಾತಾವರಣ ಸೃಷ್ಟಿಯ ಆರೋಪ

complaint
Published on

ಕುಶಾಲನಗರ:

ಕಟ್ಟೆಮಾಡು ಗ್ರಾಮದಲ್ಲಿ ಮೃತ್ಯುಂಜಯ ದೇವರ ವಾರ್ಷಿಕ ಉತ್ಸವ ಸಂದರ್ಭ ಉದ್ದೇಶಪೂರ್ವಕವಾಗಿ ಅಶಾಂತಿ ವಾತಾವರಣ ಸೃಷಿಸಲಾಗಿದೆ ಎಂದು ಕುಶಾಲನಗರ ಗೌಡ ಸಮಾಜ ಪ್ರಮುಖರು ಆರೋಪಿಸಿದ್ದಾರೆ.

ದೇವರ ಉತ್ಸವದಲ್ಲಿ ವಿನಾಕಾರಣ ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಪಾಲಿಸದವರಿಗೆ ತಡೆಯೊಡ್ಡಲಾಗಿದೆ. ಈ ಘಟನೆ ಬಳಿಕ ಸಮುದಾಯದವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಖಂಡನೀಯ. ಗಲಭೆ ಎಬ್ಬಿಸಿದ ದುಷ್ಕರ್ಮಿಗಳ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಿದೆ. ವಿನಾಕಾರಣ ಜನಾಂಗದ ವಿರುದ್ಧ ಮಾತನಾಡುವ ಮೂಲಕ ಜಾತಿ ಸಂಘರ್ಷಕ್ಕೆ ಎಡೆಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಜರುಗಿಸಿ

ಮುಂದೆ ಉಂಟಾಗಲಿರುವ ಅನಾಹುತ ತಪ್ಪಿಸಬೇಕಿದೆ ಎಂದು ಶನಿವಾರ ಸಂಜೆ ಗೌಡಸಮಾಜದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಒತ್ತಾಯಿಸಿದರು.

ಸಮಾಜ ಮುಖಂಡ ಅನಂದ್ ಕರಂದ್ಲಾಜೆ ಮಾತನಾಡಿ, ಕೊಡಗಿನ ಎಲ್ಲಾ ದೇವಸ್ಥಾನಗಳಲ್ಲಿ ಬೇರೆ ಬೇರೆ ದೈವ ಕ್ರಮಗಳಿದ್ದು ದೇವಸ್ಥಾನದ ಆಚಾರ ವಿಚಾರಗಳಲ್ಲಿ ಆ ಗ್ರಾಮದ ಜನರ ತೀರ್ಮಾನವೇ ಅಂತಿಮ. ಸಮಾಜದ ಮೇಲಿನ ದ್ವೇಷದಿಂದ ದೇವಾಲಯ ಉತ್ಸವದಲ್ಲಿ ಗಲಭೆ ಎಬ್ಬಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಈ ಹಿಂದೆ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಕೆಲವರು ಬೇಡದ ರೀತಿಯಲ್ಲಿ ಮಾತನಾಡಿದಾಗ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾವು ಮೌನವಾಗಿ ಇದ್ದೆವು. ಇದು ನಮ್ಮ ದೌರ್ಬಲ್ಯ ಎಂದು ಭಾವಿಸುವುದು ಬೇಡ. ಕಟ್ಟೆಮಾಡು ಘಟನೆಯ ಹಿನ್ನೆಲೆ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗದ ಬಗ್ಗೆ ಮತ್ತು ಕನ್ನಡದ ಬಗ್ಗೆ ಹಗುರವಾಗಿ ಹಾಗೂ ಕೆಟ್ಟದಾಗಿ ನಿಂದಿಸಿರುವ ಎಲ್ಲಾ ವ್ಯಕ್ತಿಗಳ ವಿರುದ್ಧ ದೂರ ದಾಖಲು ಮಾಡಲಾಗುವುದು. ಈ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ನಮ್ಮ ಎಲ್ಲಾ ಸಮಾಜ, ಸಂಘಟನೆಗಳೊAದಿಗೆ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆ ಮತ್ತು ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.

ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ದೇವಾಲಯದ ಬೈಲಾ ಪ್ರಕಾರ ಸಂಪ್ರದಾಯ ಪಾಲಿಸುವ ಬದಲು ಪಾರುಪಾತ್ಯ ಸಾಧಿಸಲು ಯತ್ನಿಸಿ ಸಮಾಜದಲ್ಲಿ ಗಲಭೆಯ ವಾತಾವರಣ ಸೃಷ್ಠಿಸುತ್ತಿರುವ ಕಿಡಿಗೇಡಿಗಳು ವಿನಾಕಾರಣ ಗೌಡ ಸಮುದಾಯವನ್ನು ತೆಗಳುವುದು ಸರಿಯಲ್ಲ ಎಂದರು.

ಕುಶಾಲನಗರ ಗೌಡ ಸಮಾಜದ ಉಪಾಧ್ಯಕ್ಷ ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಚೆರಿಯಮನೆ ರಷಿ ಹರೀಶ್ ಇದ್ದರು.

ಪತ್ರಿಕಾಗೋಷ್ಠಿಯ ನಂತರ ಸಮಾಜದ ಪ್ರಮುಖರು ಕುಶಾಲನಗರ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net