

ಅರಸೀಕೆರೆ : ನಗರಸಭೆಯಲ್ಲಿ ಸಿದ್ಧಪಡಿಸಿರುವ ಎಸ್‌ಎಫ್‌ಸಿ ಅನುದಾನ ಹಂಚಿಕೆ ಪಟ್ಟಿ ತಾರತಮ್ಯದಿಂದ ಕೂಡಿದ್ದು ತಕ್ಷಣವೇ ಲೋಪ ಸರಿಪಡಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಹಾಗೂ ಬಿಜೆಪಿಯ ಕೆಲ ಸದಸ್ಯರು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ಅವರನ್ನು ಪ್ರತ್ಯೇಕವಾಗಿ ಹಾಸನ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿ ದೂರು ನೀಡಿದ್ದಾರೆ.
ಎಸ್‌ಎಫ್‌ಸಿ ಮುಕ್ತನಿಧಿಯಡಿ 1.54 ಕೋಟಿ ರೂಗಳ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಕೌನ್ಸಿಲ್ ಸಭೆ ನಡೆಸದೇ ಏಕಪಕ್ಷೀಯವಾಗಿ ಅನುದಾನ ಹಂಚಿಕೆ ಮಾಡಿದ್ದು ತಾರತಮ್ಯದಿಂದ ಕೂಡಿದೆ. ನಮಗೆ ಲಭಿಸಿರುವ ದಾಖಲೆಗಳ ಅನುಸಾರ ಕೇವಲ ಒಂದೆರಡು ವಾರ್ಡ್‌ಗಳಿಗೆ ಅನುದಾನ ಮೀಸಲಿಟ್ಟು ಇನ್ನುಳಿದ ವಾರ್ಡ್‌ಗಳಿಗೆ ನಿರ್ಲಕ್ಷ್ಯ ಮಾಡಿರುವುದು ಬಹಿರಂಗವಾಗಿದೆ.ಇದಲ್ಲದೇ ಹದಿನೈದನೇ ಹಣಕಾಸು ಯೋಜನೆಯಲ್ಲಿ ವಾರ್ಡ್ ಸಂಖ್ಯೆ 1 ಕಂತೇನಹಳ್ಳಿ, 9 ಮಲ್ಲೇಶ್ವರ ನಗರ, 15 ಮಿನಿವಿಧಾನಸೌಧ ಬಡಾವಣೆ, 18 ಸುಭಾಷ್‌ನಗರ, 19 ಇಂದಿರಾನಗರ, ಚೌಡೇಶ್ವರಿ ನಗರ, 22 ಹೊಯ್ಸಳ ನಗರ, 25 ಪೇಟೆಬೀದಿ,ಹಾಗೂ 28 ಬಾಬಾ ಸಾಹೇಬ್ ಕಾಲನಿ ಹಾಗೂ ಸುನ್ನಿಚೌಕ್ ಬಡಾವಣೆಗಳನ್ನು ಉದ್ದೇಶ ಪೂರ್ವಕವಾಗಿ ರಾಜಕೀಯ ದುರುದ್ದೇಶದಿಂದ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೈ ಬಿಟ್ಟಿರುತ್ತಾರೆ. ಇದರಿಂದಾಗಿ ನಗರಸಭೆಗೆ ತೆರಿಗೆ ಪಾವತಿಸುತ್ತಿರುವ ಎಲ್ಲ ವಾರ್ಡ್‌ಗಳ ಜನ ವಸತಿ ಪ್ರದೇಶಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ ಸೇರಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನೆಡೆಯಾಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಪಟ್ಟಿಯನ್ನು ತಕ್ಷಣವೇ ಹಿಂಪಡೆದು ಲೋಪ ಸರಿಪಡಿಸಬೇಕು. ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಬೇಕು. ಲೋಪವೆಸಗಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಇದಕ್ಕೆ ಸ್ಪಂದಿಸಿ ಲೋಪ ಸರಿಪಡಿಸವ ಭರವಸೆ ನೀಡಿದ್ದಾರೆ. ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ನಗರಸಭೆ ಸದಸ್ಯರಾದ ಜಾಕೀರ್ ಹುಸೇನ್, ಈಶ್ವರಪ್ಪ, ಭಾಸ್ಕರ್, ಮುಖಂಡರಾದ ಹೊಸೂರು ಗಂಗಾಧರ್, ಹರ್ಷ ವರ್ಧನ್‌ರಾಜ್ ಇನ್ನಿತರರು ಹಾಜರಿದ್ದರು.