ಸಮಸ್ಯೆಗಳಿದ್ದರೆ ಸಂಘಕ್ಕೆ ದೂರು ಸಲ್ಲಿಸಿ; ಬಿ.ಬಿ.ಮಾದಮ್ಮಯ್ಯ

20adarshkdga3
Published on

ಮಡಿಕೇರಿ
ರಾಜ್ಯ ನಿವೃತ್ತ ಸರ್ಕಾರಿ ನೌಕರರ ಕುಂದು ಕೊರತೆ/ ಸಮಸ್ಯೆಗಳಿದ್ದರೆ ಸಂಘಕ್ಕೆ ದೂರು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಮಡಿಕೇರಿ ಅಧ್ಯಕ್ಷ ಬಿ.ಬಿ.ಮಾದಮ್ಮಯ್ಯ ಹೇಳಿದರು.


ನಗರದ ಜಿಲ್ಲಾ ಬಾಲಭವನದ (ಚೇತನ ಚಿಲುಮೆ) ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ೨೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಿವೃತ್ತ ಸರ್ಕಾರಿ ನೌಕರರ ಸಮಸ್ಯೆಗಳು/ ಕುಂದುಕೊರತೆಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸವನ್ನು ಸಂಘದ ವತಿಯಿಂದ ಮಾಡಲಾಗುತ್ತದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಸಂಘದ ಸದಸ್ಯರ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಡಲಾಗಿದೆ. ಸಂಘವನ್ನು ಉತ್ತಮವಾಗಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಳೆದ ೧೧ ತಿಂಗಳಿಂದ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಂಘದ ಬೆಳವಣಿಗೆ ಹಾಗೂ ಸಂಘದ ಸದಸ್ಯರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಲಾಗುತ್ತದೆ ಎಂದು ತಿಳಿಸಿದರು.


ನಿವೃತ್ತ ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಈಗಾಗಲೇ ಮುಖ್ಯಮಂತ್ರಿ ಅವರಿಗೆ ಸಂಘದ ವತಿಯಿಂದ ಸಲ್ಲಿಸಲಾಗಿದೆ. ನಿವೃತ್ತ ಸರ್ಕಾರಿ ನೌಕರರಿಗೆ ನಗದು ರಹಿತ ’ಸಂಜೀವಿನಿ ಭಾಗ್ಯ’ ಆರೋಗ್ಯ ಸೇವೆಯನ್ನು ನೀಡಬೇಕು. ೮೦ ವರ್ಷ ವಯೋಮಿತಿ ಮೀರಿದ ಸದಸ್ಯರಿಗೆ ೭೯ ವರ್ಷ ತುಂಬಿದ ಕೂಡಲೇ ಹೆಚ್ಚಿನ ತುಟ್ಟಿಭತ್ಯೆ ನೀಡಬೇಕು. ಏಳನೇ ವೇತನ ಆಯೋಗ ಅನುಷ್ಠಾನ, ಸರ್ಕಾರಿ ಬಸ್ ಸಂಚಾರ ಸೇವೆಯಲ್ಲಿ ಶೇ೫೦ ರಷ್ಟು ವಿನಾಯಿತಿ. ಸಂಘಕ್ಕೆ ಸೂಕ್ತ ನಿವೇಶನ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಂಘದ ಸದಸ್ಯರ ಪಿಂಚಣಿ ಸೇವೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಸಂಘದ ಬಳಿ ಕೇಳಿಕೊಂಡರೆ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಕೊಡಗು ಜಿಲ್ಲೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರವು ಜನವರಿಯಲ್ಲಿ ೭ನೇ ವೇತನ ಆಯೋಗ ಅನುಷ್ಠಾನಗೊಳಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಸರ್ಕಾರಿ ನೌಕರರ ಸಂಘಕ್ಕೆ ಸೂಕ್ತ ನಿವೇಶನ ಇಲ್ಲವೆಂದು ಜಿಲ್ಲಾಡಳಿತ ಗಮನಕ್ಕೆ ತರಲಾಗಿತ್ತು. ಆ ನಿಟ್ಟಿನಲ್ಲಿ ೪೦ ಸೆಟ್ ಜಾಗವನ್ನು ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿರವರು ಹಸ್ತಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಭವನದ ಕಾಮಗಾರಿಗಳು ಪೂರ್ಣಗೊಂಡ ನಂತರ ಸರ್ಕಾರಿ ನೌಕರರ ಹಾಗೂ ನಿವೃತ್ತ ಸರ್ಕಾರಿ ನೌಕರರ ಪ್ರತಿಯೊಂದು ಕಾರ್ಯ ಚಟುವಟಿಕೆಗಳು ಸರ್ಕಾರಿ ನೌಕರರ ಭವನದಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.


ಕುಶಾಲನಗರ ಸಂಘದ ಸಂಸ್ಥಾಪಕ ಅಧ್ಯಕ್ಷ ನಜ್ಹೀರ್ ಅಹಮ್ಮದ್ ಮಾತನಾಡಿ, ಜೀವನದಿ ಕಾವೇರಿಯನ್ನು ಎಷ್ಟು ಕಲುಷಿತ ಮಾಡಿದರು ಕೂಡ ಜೀವನದಿ ಮೌನದಿಂದ ಉದಾರವಾಗಿ ಹರಿಯುತ್ತಾಳೆ. ಅದೇ ರೀತಿಯಲ್ಲಿ ಮಾನವನು ಕೂಡ ಉದಾರತ್ವ ಸಮಾನತೆಯನ್ನು ಜೀವನದಲ್ಲಿ ರೂಡಿಸಿಕೊಳ್ಳುವಂತಾಗಬೇಕು. ಸದ್ಬುದ್ಧಿ ಮತ್ತು ಸನ್ನಡತೆ ಮಾನವನ ಹೃದಯಕ್ಕೆ ಇರುವ ಎರಡು ರೆಕ್ಕೆಗಳಾಗಿವೆ. ಪ್ರತಿಯೊಬ್ಬರು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಶಿಸ್ತು ಸಮಯಪ್ರಜ್ಞೆ ಪ್ರಾಮಾಣಿಕತೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ೮೦ ವರ್ಷ ಮೇಲ್ಪಟ್ಟ ಸಂಘದ ಸದಸ್ಯರುಗಳಾದ ಎಚ್.ಎಂ.ಮಹಮ್ಮದ್, ಕಾವೇರಪ್ಪ, ಎಂ.ಎನ್.ನಾಣಯ್ಯ, ಕೆ.ಕೆ.ತುಳಸಿ ಮಣಿರವರನ್ನು ಸನ್ಮಾನಿಸಲಾಯಿತು.


ಸಭೆಯಲ್ಲಿ ಕುಶಾಲನಗರ ಸಂಘದ ಸಂಸ್ಥಾಪಕ ಅಧ್ಯಕ್ಷ ನಜ್ಹೀರ್ ಅಹಮ್ಮದ್, ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯರು ಪದಾಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net