

ಮುಂಡಗೋಡ: ಪಟ್ಟಣದ ಬೃಂದಾವನ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿಗೆ ಮೀಸಲಿರಿಸಿದ್ದ ಜಾಗದಲ್ಲಿ ಶೌಚದಗುಂಡಿ ನಿರ್ಮಿಸಲಾಗಿದೆ. ಹಲವು ಬಾರಿ ಸೂಚಿಸಿದರೂ ತೆರವುಗೊಳಿಸದ ಮಾಲೀಕರ ವಿರುದ್ಧ ಪೊಲೀಸ್ ದೂರು ದಾಖಲಿಸಲು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗುರುವಾರ ಠರಾವು ಕೈಗೊಳ್ಳಲಾಯಿತು.
ಪಪಂ ಅಧ್ಯಕ್ಷೆ ಜಯಸುಧಾ ಭೊವಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಅವರು ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಸದಸ್ಯರಾದ ಫಣಿರಾಜ ಹದಳಗಿ, ಶೇಖರ ಲಮಾಣಿ, ವಿಶ್ವನಾಥ ಪವಾಡಶೆಟ್ಟರ ದನಿಗೂಡಿಸಿದರು. ಒತ್ತುವರಿ ನಿವೇಶನ ತೆರವುಗೊಳಿಸುವವರೆಗೆ ಬಡಾವಣೆಯ ನಿವೇಶನಗಳ ಹಕ್ಕು ಬದಲಾವಣೆ ಮಾಡಬಾರದು ಹಾಗೂ ಫಾರ್ಮ್ ನಂ.3ನೀಡಬಾರದು ಎಂದರು.
ಸಾಮಾನ್ಯ ಸಭೆಯಲ್ಲಿ ಈ ಹಿಂದೆ ಮಾಡಿದ ಠರಾವುಗಳು ಅನುಷ್ಠಾನವಾಗುತ್ತಿಲ್ಲ. ಹಾಗಿದ್ದರೆ ಸಭೆ ನಡೆಸುವುದಾದರೂ ಯಾಕಾಗಿ? ಎಂದು ಅಶೋಕ ಚಲವಾದಿ, ಮಹ್ಮದಗೌಸ ಮಕಾಂದಾರ ಪ್ರಶ್ನಿಸಿದರು. ಯಾವುದೇ ವಿಷಯದ ಕುರಿತು ಠರಾವು ಮಾಡಿದ ನಂತರ ಮುಂದಿನ ಸಭೆಯೊಳಗಾಗಿ ಠರಾವು ಮಾಡಿರುವ ಕಾರ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಪಟ್ಟಣ ಪಂಚಾಯಿತಿ ದಿನಗೂಲಿ ನೌಕರ ರಮೇಶ ಭೋವಿ ಅವರು ಕಂಪ್ಯೂಟರ್ ಆಪರೆಟರ್ ಆಗಿದ್ದಾರೆ. ಅವರ ಸಹೋದರ ಹಾಗೂ ಪತ್ನಿಯ ಹೆಸರಲ್ಲಿ ಪಟ್ಟಣ ಪಂಚಾಯಿತಿಯ ಗುತ್ತಿಗೆ ಕಾಮಗಾರಿಗಳು ನಡೆಯುತ್ತಿದ್ದು ಅವರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ವಿಶ್ವಾನಾಥ ಹಾಗೂ ಶೇಖರ ಲಮಾಣಿ ಆಗ್ರಹಿಸಿದರು.
ಪ್ರತಿಕಾ ಪ್ರಕಟಣೆ ನೀಡಿ ಬೇರೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ನಂತರ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಅನ್ನು ಅಧ್ಯಕ್ಷೆ ಜಯಸುಧಾ ಭೊವಿ ಮಂಡನೆ ಮಾಡಿದರು.
ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಇದ್ದರು.