ರಕ್ತದಾನದಿಂದ ಮರುಜನ್ಮ ನೀಡಿದ ಆತ್ಮತೃಪ್ತಿ

New Balaji
Published on

ಹುಬ್ಬಳ್ಳಿ: ರಕ್ತವು ಕೃತಕವಾಗಿ ಸಿಗುವ ವಸ್ತುವಲ್ಲ. ಅದು ಮನುಷ್ಯರ ದೇಹದಲ್ಲಿ ಉತ್ಪತ್ತಿಯಾಗುವ ನೈಜ ಸಂಪನ್ಮೂಲವಾಗಿದ್ದು, ರಕ್ತದಾನದ ಮೂಲಕ ಮತ್ತೊಬ್ಬರಿಗೆ ಮರುಜನ್ಮ ನೀಡಿದ ಆತ್ಮತೃಪ್ತಿ ಸಿಗಲಿದೆ ಎಂದು ಗದಗ ಜಿಲ್ಲೆ ಹೊಸಳ್ಳಿಯ ಜಗದ್ಗುರು ಶ್ರೀ ಬೂದೀಶ್ವರ ಸ್ವಾಮೀಜಿ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರೆೊತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ಮತ್ತು ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್ ಟೌನ್, ಐಸಿಐಸಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ಇಲ್ಲಿನ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಮುಂದುವರಿದಿದ್ದರು ಸಹ ಇಂದಿಗೂ ರಕ್ತವನ್ನು ಕೃತಕವಾಗಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ, ರಕ್ತವನ್ನು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆ ಮಾಡಬೇಕಿದೆ ಎಂದರು.

ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಅನೇಕ ಜನ ಸಾವಿಗೀಡಾಗುತ್ತಿದ್ದು, ರಕ್ತದಾನದ ಮೂಲಕ ಪ್ರತಿಯೊಬ್ಬರು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಹಸಿದಾಗ ಅನ್ನ, ದಣಿದಾಗ ನೀರು, ಅಗತ್ಯವಿದ್ದಾಗ ರಕ್ತದಾನ ಮಾಡುವುದು ಉಳಿದೆಲ್ಲ ಕಾರ್ಯಗಳಿಗಿಂತ ಶ್ರೇಷ್ಠವಾದುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ದೇಹದಲ್ಲಿನ 56 ಲೀಟರ್ ರಕ್ತದ ಪೈಕಿ ಕೇವಲ 350 ಮಿ.ಲೀನಷ್ಟು ಮಾತ್ರವೇ ರಕ್ತ ಪಡೆಯುವುದರಿಂದ ದೇಹಾರೋಗ್ಯಕ್ಕೆ ಯಾವುದೇ ಸಮಸ್ಯೆ ಕಾಡದು ಎಂದು ತಿಳಿಸಿದರು.

ಬದಲಾದ ವೈದ್ಯಕೀಯ ತಂತ್ರಜ್ಞಾನದಿಂದ ಒಬ್ಬರ ರಕ್ತದಾನದಿಂದ 3 ಅತ್ಯಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ರಕ್ತದಾನ ಬಗೆಗಿನ ಜನರಲ್ಲಿನ ತಪ್ಪು ಕಲ್ಪನೆ, ಆತಂಕವನ್ನು ಹೋಗಲಾಡಿಸಿ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ರಾಷೊ್ಟ್ರೕತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಮಾತನಾಡಿದರು. ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಐಸಿಐಸಿಐ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಘನಶ್ಯಾಮ್ ಮುಂದಾಡ, ವ್ಯವಸ್ಥಾಪಕ ರಾಘವೇಂದ್ರ, ಕನಕದಾಸ ಕಾಲೇಜಿನ ಪ್ರಾಚಾರ್ಯ ಸಂದೀಪ ಬೂದಿಹಾಳ, ಕ್ರೆಡೈ ಅಧ್ಯಕ್ಷ ಪ್ರದೀಪ ರಾಯ್ಕರ, ಸೇಂಟ್ ಪಾಲ್ಸ್ ಶಾಲೆಯ ಫಾ. ಜೋಸೆಫ್, ಬಿಜೆಪಿ ಮುಖಂಡರಾದ ರಂಗಾಬದ್ದಿ, ರಾಜು ಜರತಾರಘರ, ನೀಲಕಂಠ ತಡಸದಮಠ, ಗೋಪಾಲ ಕಲ್ಲೂರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net