ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಲಿ

Published on

ಕೊಟ್ಟೂರು: ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಸಿದ್ದೇಶ ಹೇಳಿದರು.

ಪಟ್ಟಣದ ಗೋರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಗ್ರಂಥಾಲಯದಲ್ಲಿನ ವಿವಿಧ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳ ವಿವಿಧ ವಿಷಯಗಳನ್ನು ಓದಿ ಅರ್ಥ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗಬೇಕು ಎಂದರು.

ಯೋಗ ಗುರು ರಾಮಣ್ಣ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ. ಆದ್ದರಿಂದ ಪ್ರತಿ ದಿನ ಪ್ರಾಣಾಯಾಮ, ಯೋಗ, ಧ್ಯಾನ, ವಾಕ್ ಮಾಡಬೇಕು. ಟಿವಿ, ಮೊಬೈಲ್ ನೋಡುತ್ತ ಊಟ ಮಾಡಬಾರದು. ರಾತ್ರಿ ಮಲಗುವ ಮುನ್ನ ತಪ್ಪದೆ ಹಲ್ಲುಜ್ಜಬೇಕು. ಇದರಿಂದ ಕಾಯಿಲೆಗಳು ಬಾರದಂತೆ ತಡೆಯಬಹುದು ಎಂದರು.

ಉಪನ್ಯಾಸಕ ಡಾ. ಜಗದೀಶ ಚಂದ್ರ ಬೋಸ್, ಓದಿನ ವಿವಿಧ ಮಜಲುಗಳು ಹಾಗೂ ಅಧ್ಯಯನಶೀಲ ಓದಿನ ಅಭಿರುಚಿ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕ ಭಾರೀ ಮಹಾಂತೇಶ ಹಾಗೂ ಲೊಟ್ಟನಕೇರಿ ರಾಧಾ ಅವರಿಗೆ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.

ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಉಪನ್ಯಾಸಕ ತುಷಾರ ಸ್ವಾಗತಿಸಿದರು. ಚಂದನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಮಗ್ಗದ ನಾಗರಾಜ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net