ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಕಲಿಕೆ ಅಗತ್ಯ,  ತರಬೇತಿದಾರ ಅಶೋಕಕುಮಾರ್ ಸಲಹೆ

IMG-20250726-WA0006_1-1.jpg
Published on

ಹುಬ್ಬಳ್ಳಿ: ನಿಯತಕಾಲಿಕೆಗಳು, ದಿನಪತ್ರಿಕೆಗಳು, ಹಲವಾರು ಲೇಖಕರ ಪುಸ್ತಕಗಳನ್ನು ಸ್ಪರ್ಧಾರ್ಥಿಯು ಇಡಿಯಾಗಿ ಓದುವ ಬದಲು ವ್ಯವಸ್ಥಿತವಾಗಿ ಓದಿ ಅರ್ಥೈಸಿಕೊಳ್ಳುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಕಾಣಬಹುದು ಎಂದು ಗುರುದೇವ ಐಎಎಸ್ - ಕೆಎಎಸ್ ಸ್ಟಡಿ ಸರ್ಕಲ್ ತರಬೇತಿದಾರ ಅಶೋಕ ಕುಮಾರ ಹೇಳಿದರು.

ಧಾರವಾಡದ ಸತ್ತೂರ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಹಾಗೂ ಡಾ. ಶರಣಪ್ಪ ಕೊಟಗಿ ಚಾರಿಟಬಲ್ ಟ್ರಸ್ಟ್ ಮತ್ತು ರೂರಲ್ ಬಿ.ಇಡಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ ಕುರಿತು ಅವರು ಮಾತನಾಡಿದರು.

ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಚತುರತೆಯಿಂದ ಅಧ್ಯಯನ ಮಾಡಬೇಕು. ಸಾಮಾನ್ಯ ಜ್ಞಾನದಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ, ಕ್ರೀಡೆ, ತಂತ್ರಜ್ಞಾನ, ಪ್ರಶಸ್ತಿ, ರಾಜಕೀಯ, ಆರ್ಥಿಕತೆ ಮುಂತಾದ ವಿಷಯಗಳನ್ನು ನಿರಂತರ ಕಲಿಕೆ ಮೂಲಕ ಅರ್ಥ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ, ಕಾಲೇಜಿನಲ್ಲಿ ಕಲಿಕೆ ಜತೆಗೆ ಇಂತಹ ಉಪನ್ಯಾಸ ಮಾಲಿಕೆಯ ಮೂಲಕ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ವಿಷಯಗಳನ್ನು ತಿಳಿಸಿಕೊಡಲಾಗುತ್ತಿದೆ ಎಂದರು.

ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.

ಬಸವೇಶ್ವರ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ನವೀನ್ ಕರೇರ, ಪ್ರಾಧ್ಯಾಪಕ ಎಲ್.ವೈ. ಬುಡ್ಡನವರ, ಕಾರ್ಯಕ್ರಮ ಸಂಯೋಜಕ ರಂಗನಾಥ ದಾಸರ, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಶಿಕ್ಷಣಾರ್ಥಿ ಜ್ಯೋತಿ ಪಾಟೀಲ್ ಮತ್ತು ಚೈತ್ರಾ ಬಳ್ಳಾರಿ ನಿರೂಪಿಸಿದರು. ಭೀಮರಾವ್ ಕಾಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net