

ಮಂಡ್ಯ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಅಧ್ಯಯನದ ಪರಿಶ್ರಮ ಅತ್ಯಗತ್ಯ ಎಂದು ಕೆ.ವಿ.ಶಂಕರಗೌಡ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಚನ್ನಕೃಷ್ಣಯ್ಯ ಹೇಳಿದರು.
ಇಲ್ಲಿನ ಅಶೋಕನಗರದಲ್ಲಿರುವ ಕೌಟಿಲ್ಯ ಕೆಎಎಸ್, ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅಕಾಡೆಮಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ 6ನೇ ಬ್ಯಾಚ್‌ನ ತರಬೇತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ 7ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪರಿಶ್ರಮವಿಲ್ಲದೆ ಯಾವುದನ್ನೂ ಗೆಲ್ಲಲ್ಲು ಸಾಧ್ಯವಿಲ್ಲ. ಸ್ಪರ್ಧಾರ್ಥಿಗಳು ಸಮಯ ಪಾಲನೆ, ಸರಳ ಜೀವನವು ಜ್ಞಾನವನ್ನು ಹೆಚ್ಚಿಸುತ್ತದೆ. ಸಾಧನೆ ಮಾಡುವ ಹಂಬಲವನ್ನು ಸ್ಪೂರ್ತಿಯಾಗಿರಿಸುತ್ತದೆ ಎಂದು ನುಡಿದರು.
ಅಕಾಡೆಮಿ ಆಡಳಿತಾಧಿಕಾರಿ ನಿವೃತ್ತ ಕೆಎಎಸ್ ಶಿವಕುಮಾರ್ ಮಾತನಾಡಿ, ಸಂಸ್ಥೆಯಲ್ಲಿ ತರಬೇತಿ ಪಡೆದವರು ನೂರಾರು ಜನರು ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಕೆಪಿಎಸ್ಸಿ, ಮತ್ತು ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಸ್ಥರಾಗಿದ್ದಾರೆ ಎಂದು ನುಡಿದರು.
ಅಕಾಡೆಮಿ ಅಧ್ಯಕ್ಷ ಸಿದ್ದನಗೌಡ ಬಿರಾದರ್, ಸಂಪನ್ಮೂಲ ವ್ಯಕ್ತಿಗಳಾದ ಪಾಂಡುರಂಗ, ಮಹಾಂತೇಶ್, ಕೆ.ಆರ್.ಸುನೀತಾ ಇತರರಿದ್ದರು.