

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದ ಎಲ್ಲ ಹಿರಿಯ ನಾಯಕರ ಬೆಂಬಲದೊಂದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪಧಿರ್ಸಿದ್ದೇನೆ. ಸಮಾಜದ ಜನರು ನಮ್ಮ ತಂಡಕ್ಕೆ ಬೆಂಬಲ ನೀಡಬೇಕು ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪ್ರದಿಪಗೌಡ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸ್ಪರ್ಧೆಗೆ ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಸೇರಿ ಸಮಾಜದ ಎಲ್ಲ ಜನರು ಪಕ್ಷಾತೀತವಾಗಿ ಸಮ್ಮತಿಸಿದ್ದಾರೆ. ಇದೇ ಕಾರಣಕ್ಕೆ ಕಣಕ್ಕಿಳಿದಿದ್ದೇನೆ. ಸಮಾಜದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದರು.
ನಮ್ಮ ತಂಡ ಆಯ್ಕೆಯಾದರೆ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸ್ಥಾಪನೆ, ಗ್ರಾಮ ಮಟ್ಟದಿಂದ ಜಿಲ್ಲಾ ಕೇಂದ್ರವರೆಗೆ ಧಾರ್ಮಿಕ ಸಂಸ್ಕಾರಗಳ ತರಬೇತಿ ಹಾಗೂ ಶಿಬಿರ ಏರ್ಪಡಿಸಿ ಯುವಕರಲ್ಲಿ ಧರ್ಮ ಜಾಗೃತಿ ಮೂಡಿಸುವ ಪ್ರಯತ್ನ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಹಾಲಿ ಅಧ್ಯಕ್ಷ ಗುರುರಾಜ ಹುಣಸಿಮರದ ಹಾಗೂ ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. 5 ವರ್ಷ ಆಡಳಿತ ನಡೆಸಿರುವ ಅವರು ಮತ್ತೊಮ್ಮೆ ಅಧ್ಯಕ್ಷರಾಗಲು ಆಸಕ್ತರಾಗಿದ್ದರು. ಆದರೆ ಇತರರಿಗೂ ಅವಕಾಶ ಸಿಗಲಿ ಎಂಬ ಉದ್ದೇಶಕ್ಕೆ ಚುನಾವಣೆ ನಡೆಸುವಂತಾಗಿದೆ. ಇದೊಂದು ಆರೋಗ್ಯಕರ ಚುನಾವಣೆ ಹೊರತು, ಭಿನ್ನಾಭಿಪ್ರಾಯದಿಂದ ಕೂಡಿಲ್ಲ. ಅವರೂ ಸಾಕಷ್ಟು ಒಳ್ಳೆ ಕಾರ್ಯ ನಡೆಸಿದ್ದಾರೆ ಎಂದರು.
ಹಿರಿಯ ಸದಸ್ಯ ನಾಗರಾಜ ಪಟ್ಟಣಶೆಟ್ಟಿ ಮಾತನಾಡಿ, ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರದ ಅನುದಾನ ಸಿಗದಿದ್ದರೂ ಸಮಾಜದ ಗಣ್ಯ ವಕ್ತಿಗಳ ಸಹಾಯದಿಂದ ನಿರ್ಮಿಸುತ್ತೇವೆ. ಈಗಾಗಲೇ ಆ ವಿಷಯವಾಗಿ ಗಟ್ಟಿ ನಿಲುವು ತೆಗೆದುಕೊಳ್ಳಲಾಗಿದೆ ಎಂದರು.
ಶಂಕರ ಕುಂಬಿ, ಮಹೇಶ ಬೆಲ್ಲದ, ಸವಿತಾ ಅಮರಶೆಟ್ಟಿ, ಬಸವರಾಜ ಗೋಲಪ್ಪನವರ, ಶಿವಶರಣ ಕಲಬಶೆಟ್ಟರ, ಮನೋಜ ಸಂಗೊಳ್ಳಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.