ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ..!

Competition for the post of BJP district president..!
ಬಾಗಲಕೋಟೆಯಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ಜಿಲ್ಲಾ ಕೋರ್ ಕಮೀಟಿ ಸಭೆ ನಡೆಯಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಶಿಸ್ತು ಸಮಿತಿ ಸದಸ್ಯ ಲಿಂಗರಾಜ್ ಪಾಟೀಲ್, ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಹನಮಂತ ನಿರಾಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಇತರರಿದ್ದರು.
Published on

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಬಿಜೆಪಿಯಲ್ಲಿ ಇದೀಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಹಾಲಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರನ್ನು ಬದಲಾಯಿಸಲು ಮುಂದಾದರೆ ನಾವು ಮುಖ್ಯ ಅಪೇಕ್ಷಿತರು ಎಂದು ಐದಾರು ಜನರು ಅಖಾಡಕ್ಕೆ ಇಳಿದಿದ್ದಾರೆ.

ಬಾಗಲಕೋಟೆ ನಗರದಲ್ಲಿ ಸೋಮವಾರ ಸಂಜೆ ನಡೆದ ಜಿಲ್ಲಾ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಈ ವಿಚಾರ ಹೆಚ್ಚು ಚರ್ಚೆಗೆ ಬಂದಿತು ಎಂದು ಮೂಲಗಳು ತಿಳಿಸಿವೆ.

ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾ ಬಿಜೆಪಿ ಚುನಾವಣಾ ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯ ಲಿಂಗರಾಜ್ ಪಾಟೀಲ್, ಜಿಲ್ಲೆಯ ಹಾಲಿ ಶಾಸಕರು, ಪರಿಷತ್ ಸದಸ್ಯರು ಹಾಗೂ ಕೆಲ ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಒಳಗೊಂಡ ಕೋರ್ ಕಮೀಟಿ ಸಭೆ ಸುದೀರ್ಘವಾಗಿ ನಡೆದು ಪಕ್ಷ ಸಂಘಟನೆಗಳ ಜೊತೆಗೆ ಜಿಲ್ಲಾ ಅಧ್ಯಕ್ಷರ ಸ್ಥಾನ ಹಾಗೂ ಇತರೆ ವಿಚಾರಗಳ ಬಗ್ಗೆಯೂ ಚರ್ಚೆ ನಡೆದಿದೆ. ಒಟ್ಟು 19 ಜನ ಕೋರ್ ಕಮೀಟಿ ಸದಸ್ಯರ ಪೈಕಿ ನಾಲ್ವರು ಗೈರು ಉಳಿದಿದ್ದು,15 ಜನರು ಹಾಜರಿದ್ದರು ಎಂದು ತಿಳಿದು ಬಂದಿದೆ.

ಪಕ್ಷದ ಸಂಘಟನಾ ಪರ್ವ, ಸದಸ್ಯತ್ವ ಅಭಿಯಾನ, ಬೂತ್ ಕಮೀಟಿ ರಚನೆ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಯ 12 ಮಂಡಳಗಳ ಪೈಕಿ ಈಗಾಗಲೇ 9 ಮಂಡಳಿಗಳ ಅಧ್ಯಕ್ಷರ ಆಯ್ಕೆ ಆಗಿದ್ದು, ಬಾಕಿ ಮೂರು ಮಂಡಳಗಳ ಅಧ್ಯಕ್ಷ ಆಯ್ಕೆ ಬೇಗ ಮಾಡುವಂತೆ ಸಭೆಯಲ್ಲಿ ತೀರ್ಮಾನ ಆಗಿದೆ.

ಬಳಿಕ ಜಿಲ್ಲಾ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪ ಆಗಿ, ಹಾಲಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರನ್ನು ಮುಂದುವರಿಸಿದರೆ ಅಭ್ಯಂತರ ಇಲ್ಲ ಎನ್ನುವ ಮಾತುಗಳೂ ಕೇಳಿ ಬಂದವು ಎನ್ನಲಾಗಿದೆ. ಇದೇ ವೇಳೆ ಜಿಲ್ಲಾ ಅಧ್ಯಕ್ಷ ಸ್ಥಾನದ ಅಪೇಕ್ಷಿತರ ಹೆಸರುಗಳು ಸಹ ಸಭೆಯಲ್ಲಿ ಪ್ರಸ್ತಾಪ ಆಗಿವೆ. ಜಿಲ್ಲಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಅಪೇಕ್ಷೆಯನ್ನು ಶಾಂತಗೌಡ ಪಾಟೀಲ ವ್ಯಕ್ತಪಡಿಸಿದ್ದಾರೆ.

ಸದ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ರಾಜು ನಾಯ್ಕರ್ ಅವರು, ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದರೆ ತಾವು ಪ್ರಬಲ ಆಕಾಂಕ್ಷಿ ಎಂದು ಸಭೆಗೆ ತಿಳಿಸಿದ್ದಾರಂತೆ. ಇದೇ ವೇಳೆ ಮೋಹನ ಜಾಧವ ತಮ್ಮ ಹೆಸರನ್ನೂ ಪರಿಗಣಿಸುವಂತೆ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಉಮೇಶ ಮಹಾಬಳಶೆಟ್ಟಿ ಹೆಸರನ್ನು ಪರಿಷತ್ ಸದಸ್ಯ ಹನಮಂತ ನಿರಾಣಿ ಪ್ರಸ್ತಾಪಿಸಿದರು ಎನ್ನಲಾಗಿದೆ. ಪಕ್ಷದ ನಿರ್ಧಾರ ಒಪ್ಪಿಕೊಳ್ಳುವ ಮಾತನ್ನು ವೀರಣ್ಣ ಚರಂತಿಮಠ ವ್ಯಕ್ತಪಡಿಸಿದರು.

ಇನ್ನು ಜಿಲ್ಲಾ ಅಧ್ಯಕ್ಷ ಸ್ಥಾನ ಬದಲಾಯಿಸುವುದಾದರೆ ಈ ಸಲ ಪರಿಶಿಷ್ಟ ಪಂಗಡಕ್ಕೆ ಕೊಡಿ ಎನ್ನುವ ಮಾತನ್ನು ಆಕಾಂಕ್ಷಿ ರಾಜು ನಾಯ್ಕರ್ ಹೇಳಿದ್ದು, ಇದಕ್ಕೆ ತಮ್ಮದೇನು ವಿರೋಧ ಇಲ್ಲ ಎಂದು ಬಾದಾಮಿಯ ಮಾಜಿ ಶಾಸಕರೊಬ್ಬರು ಧ್ವನಿಗೂಡಿಸಿದರು ಎಂದು ತಿಳಿದು ಬಂದಿದೆ.

ಆದರೆ, ಇವೆಲ್ಲವೂ ಹಾಲಿ ಅಧ್ಯಕ್ಷರನ್ನು ಬದಲಾಯಿಸಲು ಪಕ್ಷ ತೀರ್ಮಾನ ಮಾಡಿದರೆ ಮಾತ್ರ ಎನ್ನುವುದನ್ನು ಎಲ್ಲರೂ ಹೇಳಿದ್ದಾರಂತೆ. ಹೀಗಾಗಿ ಹಾಲಿ ಅಧ್ಯಕ್ಷರ ವಿರುದ್ಧ ಯಾರೂ ಸಹ ಬದಲಾವಣೆ ಆಗಲಿ ಎಂದು ಹೇಳಿಲ್ಲ.

ಸಭೆಯಲ್ಲಿ ಬಾಗಲಕೋಟೆ ಗ್ರಾಮೀಣ ಹಾಗೂ ನಗರ ಅಧ್ಯಕ್ಷರನ್ನು ಮತ್ತೆ ಮುಂದುವರಿಸಿದ್ದು, ಅವಧಿ ಮುಗಿದ ಮೇಲೆ ಬದಲಾವಣೆ ಮಾಡಿ, ಬೇರೆಯವರಿಗೆ ಅವಕಾಶ ಕೊಡಬೇಕಿತ್ತು ಎಂದು ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರಂತೆ.

ಈಗಾಗಲೇ ಮುಂದುವರಿಸಲಾಗಿದೆ. ಅವರ ಅವಧಿ ಮುಗಿದ ಮೇಲೆ ಬದಲಾವಣೆ ಬಗ್ಗೆ ನೋಡೋಣ ಎಂದು ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ತಮ್ಮ ಅಭಿಪ್ರಾಯ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net