ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

26 hnl purashbe
Published on

ಹಾನಗಲ್ಲ: ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ಆ.27 ರಂದು ನಿಗದಿಯಾಗಿದೆ. ಅಧ್ಯಕ್ಷೆ ಹುದ್ದೆಗೇರಲು ಸದಸ್ಯರು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ಸ್ಥಳೀಯ ಪುರಸಭೆಯಲ್ಲಿ ಕಾಂಗ್ರೆಸ್‌ನ 18, ಬಿಜೆಪಿಯ 4 ಹಾಗೂ ಪಕ್ಷೇತರ ಒಬ್ಬ ಸೇರಿದಂತೆ ಒಟ್ಟು 23 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಬ ವರ್ಗದ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ಇದೆ. ಮೊದಲ ಅವಧಿಯಲ್ಲಿ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಅನಂತವಿಕಾಸ ನಿಂಗೋಜಿ ಅಧ್ಯಕ್ಷರಾಗಿ, ಮಹೇಶ ಪವಾಡಿ, ರವಿ ಹನುಮನಕೊಪ್ಪ, ಶಂಶಿಯಾಬಾನು ಬಾಳೂರ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ವೀಣಾ ಗುಡಿ ಅವರನ್ನು ಹೊರತುಪಡಿಸಿ ಬೇರೆ ಯಾರು ಬ ವರ್ಗದ ಮೀಸಲಾತಿ ಹೊಂದಿಲ್ಲ. ಹೀಗಾಗಿ, ವೀಣಾ ಗುಡಿ ಅವರ ಆಯ್ಕೆ ನಿಶ್ಚಿತ. ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಸದಸ್ಯರ ಮಧ್ಯೆ ಪ್ರಬಲ ಪೈಪೋಟಿ ಎದುರಾಗಿದೆ. ಈಗಾಗಲೇ ಶಾಸಕ ಶ್ರೀನಿವಾಸ ಮಾನೆ ಅವರು ಎರಡು ಬಾರಿ ಎಲ್ಲ ಸದಸ್ಯರ ಸಭೆ ನಡೆಸಿ, ಪ್ರತ್ಯೇಕ ಅಭಿಪ್ರಾಯ ಪಡೆದುಕೊಂಡಿದ್ದಾರೆ.

ಪುರಸಭೆ ಇತಿಹಾಸದಲ್ಲಿಯೇ ಬ್ರಾಹ್ಮಣ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ಆಗಿರುವುದರಿಂದ ತಮ್ಮನ್ನು ಪರಿಗಣಿಸುವಂತೆ ಬ್ರಾಹ್ಮಣ ಸಮುದಾಯದ ರಾಧಿಕಾ ದೇಶಪಾಂಡೆ ಪ್ರಬಲ ವಾದ ಮಂಡಿಸಿದ್ದಾರೆ. ಗಂಗಾಮತ ಸಮುದಾಯಕ್ಕೆ ಸೇರಿದ ಮಮತಾ ಆರೇಗೊಪ್ಪ ಅವರು ತಮ್ಮ ಪಕ್ಷ ನಿಷ್ಠೆ, ಹಿರಿತನ, ಬದ್ಧತೆ, ಸೇವೆ ಪರಿಗಣಿಸಬೇಕು. ಪತಿ ಒಂದು ಬಾರಿ ಮತ್ತು ತಾವು ಎರಡು ಬಾರಿ ಸದಸ್ಯರಾಗಿದ್ದರೂ ಅಧ್ಯಕ್ಷ ಸ್ಥಾನ ನೀಡಿಲ್ಲ. ಈ ಹಿಂದಿನ ಅವಧಿಯಲ್ಲಿ ಎರಡು ಬಾರಿ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಹೀಗಾಗಿ, ಈ ಹಿಂದೆ ನೀಡಿದ್ದ ಭರವಸೆಯಂತೆ ಅವಕಾಶ ಕೊಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ.

ಹಿಂದಿನ ಅವಧಿಯಲ್ಲಿ ಸ್ಥಾಯಿ ಸಮಿತಿ ಚೇರ್ಮನ್ ಆಗಿದ್ದ ಮರಾಠ ಸಮುದಾಯದ ಪರಶುರಾಮ ಖಂಡೂನವರ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಮಹೇಶ ಪವಾಡಿ ಅಧ್ಯಕ್ಷ ಸ್ಥಾನಕ್ಕೆ ಒತ್ತಡ ಹೇರಿದ್ದರು. ಈ ಹಿಂದೆ ಉಪಾಧ್ಯಕ್ಷ ಅಧಿಕಾರ ಸಿಕ್ಕಿದೆ. ಹೀಗಾಗಿ, ಉಳಿದವರಿಗೂ ಅವಕಾಶ ನೀಡಬೇಕೆಂಬ ಶಾಸಕರ ಸೂಚನೆ ಮೇರೆಗೆ ಪವಾಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯ ಎಸ್.ಕೆ. ಪೀರಜಾದೆ, ಇನ್ನುಮುಂದೆ ಚುನಾವಣಾ ರಾಜಕಾರಣದಿಂದೆ ಹಿಂದೆ ಸರಿಯುತ್ತಿದ್ದು, ಇದು ಕೊನೆಯ ಅವಕಾಶ. ಹೀಗಾಗಿ, ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಮಾಧಾನ ತಂತ್ರ: ಪುರಸಭೆ ಅಧಿಕಾರಾವಧಿ ಕೇವಲ 13 ತಿಂಗಳಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಆಕಾಂಕ್ಷಿಗಳಾದ ನಾಲ್ವರು ಸದಸ್ಯರಿಗೂ ತಲಾ ಮೂರೂವರೆ ತಿಂಗಳು ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಿ ಸಮಾಧಾನಪಡಿಸುವ ಲೆಕ್ಕಾಚಾರ ನಡೆಯುತ್ತಿದೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, ಶಾಸಕ ಶ್ರೀನಿವಾಸ ಮಾನೆ ಅವರ ನಿರ್ಣಯವನ್ನು ಎಲ್ಲ ಸದಸ್ಯರು ಒಪ್ಪುವುದು ನಿಶ್ಚಿತ ಎನ್ನಲಾಗಿದೆ. ಆ. 27ರಂದು ಈ ಎಲ್ಲ ಪ್ರಹಸನಕ್ಕೆ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net