ಭಗವದ್ಗೀತಾ ಅಭಿಯಾನ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ

YLP Shankar
Published on

ಯಲ್ಲಾಪುರ: ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಭಗವದ್ಗೀತಾ ಅಭಿಯಾನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅಭಿಯಾನದ ರಾಜ್ಯ ಸಮಿತಿ ಪ್ರಮುಖ ಡಾ. ಶಂಕರ ಭಟ್ಟ ಬಾಲೀಗದ್ದೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಕೋಲಾ, ಮುಂಡಗೋಡ ತಾಲೂಕಿನ ಕೆಲ ಭಾಗಗಳನ್ನೂ ಯಲ್ಲಾಪುರ ತಾಲೂಕಿನ ಜತೆಯಲ್ಲೇ ಸೇರಿಸಿಕೊಳ್ಳಾಗಿದೆ. ಅಕ್ಟೋಬರ್ 26ರಂದು ಪ್ರಶಿಕ್ಷಣದೊಂದಿಗೆ ಆರಂಭವಾದ ಅಭಿಯಾನ, ನ.4 ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು. ಈವರೆಗೆ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ 100 ಕೇಂದ್ರಗಳಲ್ಲಿ ನಡೆಯಲಿದೆ. ಕುಣಬಿ, ಗೌಳಿ, ಸಿದ್ದಿ, ಮರಾಠಿ ಸಮುದಾಯದವರು ಹೆಚ್ಚಾಗಿರುವ ಭಾಗಗಳಲ್ಲಿ ವಿಶಿಷ್ಟ ಕೇಂದ್ರಗಳ ಮೂಲಕ ಭಗವದ್ಗೀತೆಯ ಬೋಧನೆ ನಡೆಯುತ್ತಿದೆ ಎಂದರು.

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗೆ ಮೂರು ಹಂತಗಳಲ್ಲಿ 7 ಸ್ಪರ್ಧೆಗಳು ನಡೆಯಲಿವೆ. ಡಿ.2 ರಂದು 10 ಗಂಟೆಗೆ ತಾಲೂಕು ಮಟ್ಟದ ಸ್ಪರ್ಧೆಗಳು ನಾಯಕನಕೆರೆ ಶಾರದಾಂಬಾ ದೇವಸ್ಥಾನದಲ್ಲಿ ಆಯೋಜನೆಗೊಂಡಿವೆ. ಜಿಲ್ಲಾ ಮಟ್ಟದ ಸ್ಪರ್ಧೆಗಳು ಡಿ. 7ರಂದು ಶಿರಸಿಯ ಲಯನ್ಸ್ ಶಾಲೆಯಲ್ಲಿ ನಡೆಯಲಿದೆ. ರಾಜ್ಯಮಟ್ಟದ ಸ್ಪರ್ಧೆಗಳು ವಿಜಯಪುರದಲ್ಲಿ ಶ್ರೀಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸಂಚಾಲಕ ಕೆ.ಜಿ.ಬೋಡೆ ಮಾತನಾಡಿ, ಪಕ್ಕದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲೂ ಅಭಿಯಾನ ನಡೆಸಲಾಗುತ್ತಿದೆ. ಶ್ರದ್ಧೆಯಿಂದ ಆ ಭಾಗದ ಜನರು ಭಾಗವಹಿಸುತ್ತಿದ್ದಾರೆ ಎಂದರು.

ತಾಲೂಕು ಅಭಿಯಾನ ಸಮಿತಿ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ ಮಾತನಾಡಿ, ಈ ಬಾರಿ ಅಭಿಯಾನದ ಜಿಲ್ಲಾ ಮಟ್ಟದ ಸಮರ್ಪಣಾ ಕಾರ್ಯಕ್ರಮ ಯಲ್ಲಾಪುರದಲ್ಲಿ ಜ. 4ರಂದು ನಡೆಯಲಿದೆ. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಶಂಕರ ಭಟ್ಟ ತಾರೀಮಕ್ಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net