

ಮಳವಳ್ಳಿ: ತಾಲೂಕಿನ ಮೇಗಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾನುವಾರ ವಿದ್ಯಾರ್ಥಿಗಳ ಪಾಲಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಶಾಲಾ ಆವರಣದಲ್ಲಿ ಮಕ್ಕಳ ಪಾಲಕರಿಂದ ಮ್ಯೂಸಿಕಲ್ ಚೇರ್, ಬಕೆಟ್ ಇನ್ ದಿ ಬಾಲ್, ಮಡಿಕೆ ಹೊಡೆಯುವುದು ಸೇರಿದಂತೆ ಹಲವು ಮನರಂಜನಾತ್ಮಕ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕ ಎಂ.ರಾಜು ಮಾತನಾಡಿ, ಪಾಲಕರು ತಮ್ಮ ಮಕ್ಕಳ ಆಟೋಟಗಳನ್ನು ನೋಡಿ ಖುಷಿಪಡುವುದರ ಜತೆಗೆ ತಾವುಗಳೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮಿಸಬೇಕೆಂಬ ಉದ್ದೇಶದಿಂದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆ.15ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಹುಮಾನ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸಹ ಶಿಕ್ಷಕ ಚುಂಚಣ್ಣ, ರತಿ ಇತರರು ಇದ್ದರು.