

ವಿಜಯಪುರ: ವಿವಿಧ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಾಮ ನಿರ್ದೇಶನಗೊಂಡಿದ್ದ ನಾಲ್ವರು ಸದಸ್ಯರ ತೆರವಾದ ಸ್ಥಾನಕ್ಕೆ ಜಿಲ್ಲೆಯಿಂದಲೂ ಪೈಪೋಟಿ ಆರಂಭಗೊಂಡಿದೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಪಿ. ಯೋಗೇಶ್ವರ, ಪ್ರಕಾಶ ರಾಠೋಡ, ಕೆ.ಎಂ. ತಿಪ್ಪೇಸ್ವಾಮಿ ಹಾಗೂ ಯು.ಬಿ. ವೆಂಕಟೇಶ್ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ತೆರವಾದ ಸ್ಥಾನಕ್ಕೆ ಹೊಸಬರನ್ನು ನಾಮಕರಣ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ತನ್ನಿಮಿತ್ತ ಜಿಲ್ಲಾ ರಾಜಕಾರಣದಲ್ಲೂ ಪೈಪೋಟಿ ಜೋರಾಗಿದ್ದು, ಆಗಲೇ ಕೆಲವರು ಲಾಬಿ ಆರಂಭಿಸಿದ್ದಾರೆ.
ಪ್ರಕಾಶ ರಾಠೋಡ ಅವರನ್ನು ಮತ್ತೆ ಮುಂದುವರಿಸುವ ಸಾಧ್ಯತೆ ದಟ್ಟವಾಗಿದ್ದರೂ ಕೆಲವರು ಹೊಸಬರಿಗೆ ಅವಕಾಶ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅದೇ ಸಮುದಾಯದ ಕಾಂತಾ ನಾಯಕ ಕೂಡ ರೇಸ್‌ನಲ್ಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ರಾಜು ಆಲಗೂರ ಪರಿಶಿಷ್ಟ ಜಾತಿ ಕೋಟಾದಡಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಪರಿಶಿಷ್ಟ ಪಂಗಡದ ನಾಯಕ ಶರಣಪ್ಪ ಸುಣಗಾರ, ಅಲ್ಪಸಂಖ್ಯಾತ ಸಮುದಾಯದ ಡಾ.ಮಕ್ಬುಲ್ ಬಾಗವಾನ, ಎಸ್.ಎಂ. ಪಾಟೀಲ ಗಣಿಹಾರ, ಹಿಂದುಳಿದ ವರ್ಗದ ಕೋಟಾದಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮತ್ತಿತರರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಅನೇಕ ನಾಯಕರು ಅವಕಾಶಗಳಿಗಾಗಿ ಕಾತರದಿಂದ ಕಾಯ್ದು ಕುಳಿತಿದ್ದಾರೆ. ಸಣ್ಣ ಸಮುದಾಯಗಳು ಸಾಕಷ್ಟು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಯುವಕರಿಗೆ ಮಣೆ ಹಾಕುತ್ತಿಲ್ಲವೆಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಲೇ ಇದ್ದು, ಈ ಬಾರಿಯಾದರೂ ಯುವಕರು, ಪ್ರಜ್ಞಾವಂತರಿಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ. ಶಾಸಕರು, ಸಚಿವರ ಬೆಂಬಲಿಗರು ಮಾತ್ರ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಕಾರಣ ಪಕ್ಷಕ್ಕಾಗಿ ದುಡಿದವರು ತೆರೆ ಮರೆಯಲ್ಲಿಯೇ ಉಳಿಯುತ್ತಿದ್ದಾರೆ. ಹೀಗಾಗಿ ನಿಷ್ಟಾವಂತರಿಗೂ ಅವಕಾಶ ಕಲ್ಪಿಸಿದರೆ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರು ಅಂಬೋಣ.