ಇ ಖಾತೆ ವಿತರಣೆಯಲ್ಲಿ ಶಾಸಕರು, ನಗರಸಭಾ ಅಧ್ಯಕ್ಷರ ಬಣದ ನಡುವೆ ಪೈಪೋಟಿ

6CBP5(chikkaballapurnagarasabe)
Published on

ಚಿಕ್ಕಬಳ್ಳಾಪುರ: ಇ ಖಾತೆಗೆ ಜನರು ಎಲ್ಲ ದಾಖಲೆಗಳನ್ನು ಅರ್ಜಿ ಸಲ್ಲಿಸಿದರೂ ಅಲೆದಾಡಿಸಿ, ಹಣಕ್ಕೆ ಪೀಡಿಸುತ್ತಿದ್ದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇದೀಗ ಸೇವೆಗೆ ಸ್ಥಳಿಯ ಜನಪ್ರತಿನಿಧಿಗಳ ನಡುವೆ ಪೈಪೋಟಿ ಉಂಟಾಗಿದೆ.

ಹೌದು! ಒಂದೆಡೆ ಶಾಸಕ ಪ್ರದಿಪ್ ಈಶ್ವರ್ ಅಯ್ಯರ್, ಮತ್ತೊಂದೆಡೆ ನಗರಸಭಾ ಅಧ್ಯಕ್ಷ ಎ.ಗಜೇಂದ್ರ ವಾರ್ಡುವಾರು ಅಭಿಯಾನ ಕೈಗೊಳ್ಳುತ್ತಿರುವುದರ ಬಗ್ಗೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುವ ಮೂಲಕ ಪಾರದರ್ಶಕ ಸೇವೆ ಒದಗಿಸುವ ಜಪ ಮಾಡಿದ್ದಾರೆ.

ಹಲವು ವರ್ಷಗಳಿಂದಲೂ ಅಕ್ರಮ ಸಕ್ರಮ ಪ್ರಕರಣಗಳ ಅರ್ಜಿ ಇತ್ಯರ್ಥವಾಗದೇ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು. ಇದರ ನಡುವೆ ಅಗತ್ಯ ಸೌಕರ್ಯಗಳನ್ನು ಒದಗಿಸಿದ್ದರೂ ಆಸ್ತಿ ಖಾತೆ, ಕಟ್ಟಡ ನಿರ್ಮಾಣ ಪರವಾನಗಿ, ನೀರು ಸೇರಿದಂತೆ ಇತರ ಶುಲ್ಕಗಳು ಸಂದಾಯವಾಗದೇ ಸ್ಥಳಿಯ ಆಡಳಿತ ಸಂಸ್ಥೆಗಳ ಆದಾಯಕ್ಕೆ ಖೋತಾ ಬೀಳುತ್ತಿತ್ತು. ಇದಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದರೂ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರವು ನಿಯಮಾನುಸಾರ ಖಾತೆಯನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಆದೇಶ ಹೊರಡಿಸಿದೆ.

ನಿಯಮಬಾಹಿರವಾಗಿ ರೂಪುಗೊಂಡ ನಿವೇಶನ ಹಾಗೂ ಕಟ್ಟಡ ಆಸ್ತಿಗಳಿಗೆ ಬಿ -ಖಾತೆ ನೀಡಲಾಗುತ್ತದೆ. ಇದನ್ನು ಹೊಂದಿದ್ದರೆ ಎ ಖಾತೆ ಮಾದರಿಯಲ್ಲಿ ಬ್ಯಾಂಕ್ ಸಾಲ ಪಡೆಯಬಹುದು ಇಲ್ಲವೇ ಆಸ್ತಿಯನ್ನು ಮಾರಾಟ ಮಾಡಬಹುದಾಗಿದೆ.

*ನಿವಾರಣೆಯಾಗುತ್ತಾ ಸಮಸ್ಯೆ?

ನಕಲಿ ಖಾತೆಗಳ ಸೃಷ್ಟಿ, ದಾಖಲೆಗಳ ಅಕ್ರಮ ತಿದ್ದುಪಡಿ, ಇ ಖಾತೆ ಮತ್ತು ಪರವಾನಗಿ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಸೇರಿದಂತೆ ಅವ್ಯವಹಾರಗಳ ಪೀಡಕ ಕೇಂದ್ರವಾಗಿ ನಗರಸಭೆಯು ಕುಖ್ಯಾತಿಗೆ ಪಾತ್ರವಾಗಿದ್ದು ಈಗಲಾದರೂ ಅಭಿಯಾನದ ಮೂಲಕ ಆಸ್ತಿ ಖಾತೆ ವಿಚಾರವಾಗಿ ಸಮಸ್ಯೆ ನಿವಾರಣೆಯಾಗುತ್ತಾ? ಪಾರದರ್ಶಕವಾಗಿ ಜನರಿಗೆ ಸೇವೆ ಒದಗಿಸಲಾಗುತ್ತದೆಯೇ? ಎನ್ನುವುದು ಜನರ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net