ಗ್ರೂಪ್​ "ಸಿ' ಹುದ್ದೆಗೆ ತಮ್ಮವರನ್ನು ಕೂರಿಸಲು ಪೈಪೋಟಿ: ಬಿಬಿಎಂಪಿಗೆ ಪತ್ರ ಬರೆದ ಡಿಕೆಶಿ, ರಾಮಲಿಂಗಾರೆಡ್ಡಿ

bbmp digital
Published on

ಬೆಂಗಳೂರು:ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಹುದ್ದೆಗೆ ತಮ್ಮವರನ್ನು ಕೂರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ಸಚಿವ ರಾಮಲಿಂಗಾರೆಡ್ಡಿ ನಡುವೆಯೇ ಪ್ರಬಲ ಪೈಪೋಟಿ ನಡೆದಿದ್ದು, ಒಂದೇ ಹುದ್ದೆಗೆ ಎರಡೆರಡು ಹೆಸರು ಶಿಫಾರಸ್ಸು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಎನ್​. ಮಂಜುನಾಥ್​(ಮೌಲ್ಯಮಾಪಕರು) ಎಂಬುವರು ಎಚ್​ಎಸ್​ಆರ್​ಲೇಔಟ್​ನ ಉಪ ವಿಭಾಗದಲ್ಲಿ ಸಹಾಯಕ ಕಂದಾಯ ಅಧಿಕಾರಿ ಹುದ್ದೆಯಲ್ಲಿ ಪ್ರಭಾರದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಆಡಳಿತಾತ್ಮಕ ದೃಷ್ಟಿಯಿಂದ ಹಾಲಿ ಹುದ್ದೆಯಲ್ಲೇ ಮುಂದುವರಿಸಬೇಕೆಂದು ಡಿಕೆಶಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೆ.18ರಂದು ಟಿಪ್ಪಣಿ ಕೊಟ್ಟಿದ್ದಾರೆ. ಅದೇರೀತಿ, ಬೊಮ್ಮನಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್​.ಪ್ರಕಾಶ್​(ಮೌಲ್ಯಮಾಪಕರು) ಅವರನ್ನು ಎಚ್​ಎಸ್​ಆರ್​ ಲೇಔಟ್​ನ ಉಪವಿಭಾಗಕ್ಕೆ ವರ್ಗಾಯಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಚಿವ ರಾಮಲಿಂಗಾರೆಡ್ಡಿ, ಸೆ.5ರಂದು ತುಷಾರ್​ ಗಿರಿನಾಥ್​ ಅವರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ.

ಸರ್ಕಾರ ಮಟ್ಟದಲ್ಲಿ ಪ್ರಭಾವಿ ಆಗಿರುವ ಇಬ್ಬರು, ಗ್ರೂಪ್​ "ಸಿ' ಹುದ್ದೆಗೆ ತಮ್ಮವರನ್ನು ಕೂರಿಸಲು ಮುಂದಾಗಿರುವದು ಹಾಸ್ಯಸ್ಪದವಾಗಿದೆ. ವೃಂದ ಮತ್ತು ನೇಮಕಾತಿ ನಿಯಮದಂತೆ ಸಹಾಯಕ ಕಂದಾಯ ಅಧಿಕಾರಿಗೆ ಈ ಹುದ್ದೆ ನೀಡಬೇಕು. ಆದರೆ. ಮೌಲ್ಯಮಾಪಕರು ಸೇರಿ ಬೇರೆ ಹುದ್ದೆಯಲ್ಲಿ ಕಾರ್ಯನಿರ್ವಹಿತ್ತಿರುವವರಿಗೆ, ಕಿರಿಯ ಅಧಿಕಾರಿಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಸಹಾಯಕ ಕಂದಾಯ ಅಧಿಕಾರಿ ಹುದ್ದೆ ನೀಡುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.

ಬಡ್ತಿಗೆ ಸರ್ಕಾರ ಮೀನಮೇಷ: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 4 ಸಹ ಕಂದಾಯ ಅಧಿಕಾರಿಗಳಿಗೆ ತಿಂಗಳದೊಳಗೆ ಬಡ್ತಿ ನೀಡಬೇಕೆಂದು ಹೈಕೋರ್ಟ್​ ಆದೇಶ ಹೊರಡಿಸಿದ್ದರೂ ಸರ್ಕಾರ, ಮೀನಮೇಷ ಎಣಿಸುತ್ತಿದೆ. ಸಹ ಕಂದಾಯ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ವಿ.ವೀಣಾ, ಎಸ್​.ಎನ್​. ವೆಂಕಟೇಶ್​, ವಿ. ಮಂಜುನಾಥ ಹಾಗೂ ಟಿ.ಶ್ರೀನಿವಾಸ್​ ಮೂರ್ತಿ ಎಂಬುವರಿಗೆ ವೃಂದ ಮತ್ತು ನೇಮಕಾತಿ (ಸಿಆ್ಯಂಡ್​ಆರ್​) ನಿಯಮದಂತೆ ಸಹಾಯಕ ಆಯುಕ್ತ ಹುದ್ದೆಗೆ ಬಡ್ತಿ ಹೊಂದಿದ್ದರೂ 12 ತಿಂಗಳಿಂದ ಹುದ್ದೆ ಸಿಕ್ಕಿಲ್ಲ. ಬಡ್ತಿ ವಿಳಂಬ ಆದೇಶ ಹೊರಡಿಸಲು ಸರ್ಕಾರ ವಿಳಂಬ ಮಾಡುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೋರ್ಟ್​, ಅಧಿಕಾರಿಗಳಿಗೆ ಕೂಡಲೇ ಬಡ್ತಿ ನೀಡಿ ಹುದ್ದೆ ಹಂಚಿಕೆ ಮಾಡಬೇಕೆಂದು ಹೈಕೋರ್ಟ್​, ನಗರಾಭಿವೃದ್ಧಿ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯಆಯುಕ್ತ ಹಾಗೂ ಪಾಲಿಕೆ ಉಪ ಆಯುಕ್ತ (ಆಡಳಿತ) ಅವರಿಗೆ ಸೂಚಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net