ಹಳ್ಳಿಗಳಲ್ಲಿ ಹಿಡಿತ ಸಾಧಿಸಲು ಪೈಪೋಟಿ

Gramayana Logo
Published on

ಹಾವೇರಿ: ಗ್ರಾಪಂ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜಿಲ್ಲೆಯ ಗ್ರಾಪಂಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಬೇರು ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ಕೈ, ಕಮಲ ಪಕ್ಷದಲ್ಲಿ ಭರದ ತಾಲೀಮು ಆರಂಭಗೊಂಡಿದೆ.

ಚುನಾವಣೆಗೆ ಮುಹೂರ್ತ ನಿಗದಿಯ ದಿನವೇ ಜಿಲ್ಲೆಯಲ್ಲಿ ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಿ ಕಾರ್ಯಕರ್ತರನ್ನು ಹಳ್ಳಿಫೈಟ್​ಗೆ ಸಿದ್ಧಗೊಳಿಸಲು ಆರಂಭಿಕ ಹೆಜ್ಜೆಯಿಡಲಾಗಿತ್ತು. ಇದಾದ ನಂತರ ಬಿಜೆಪಿಯ ನಾಯಕರು ರಾಜ್ಯ ಕಾರ್ಯಕಾರಿಣಿಯಲ್ಲಿ ತೊಡಗಿಕೊಂಡಿದ್ದು, ಸ್ಥಳೀಯ ನಾಯಕರು ಕಾರ್ಯಕರ್ತರನ್ನು ದೂರವಾಣಿ ಮೂಲಕ ಸಂರ್ಪಸಿ ಗ್ರಾಪಂವಾರು ಒಮ್ಮತದ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸುವಂತೆ ಸೂಚನೆ ನೀಡುತ್ತಿದ್ದಾರೆ.

ಕಾಂಗ್ರೆಸ್ ಸ್ವಲ್ಪ ವಿಳಂಬವಾಗಿಯಾದರೂ ಡಿ. 4ರಿಂದ ಜಿಲ್ಲೆಯಲ್ಲಿ ತಾಲೂಕುವಾರು ಕಾರ್ಯಕರ್ತರ ಸಭೆಗಳನ್ನು ಆರಂಭಿಸಿದೆ. ಸಭೆಯಲ್ಲಿ ಗ್ರಾಪಂ, ವಾರ್ಡ್​ವಾರು ಒಮ್ಮತದ ಅಭ್ಯರ್ಥಿಗಳ ಪಟ್ಟಿ ಸಿದ್ಧತೆಯಲ್ಲಿ ತೊಡಗುವಂತೆ ಸೂಚನೆ ನೀಡಲಾಗುತ್ತಿದೆ. ಪಕ್ಷದ ಎಲ್ಲ ನಾಯಕರು ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಹುರುಪು ತುಂಬುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೈಗೆ ಈ ಚುನಾವಣೆ ಮಹತ್ವದ್ದು: ಈಗಾಗಲೇ ಲೋಕಸಭೆ ಹಾಗೂ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ಸದ್ಯ ಜಿಪಂ ಸೇರಿ ಕೆಲ ತಾಪಂ, ನಗರಸಭೆ, ಪುರಸಭೆ, ಪಪಂಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಇನ್ನಾರು ತಿಂಗಳಲ್ಲಿ ಜಿಪಂ, ತಾಪಂಗಳಿಗೂ ಚುನಾವಣೆ ಬರಲಿದ್ದು, ಇದರಲ್ಲಿ ಮತ್ತೆ ತನ್ನ ಅಧಿಪತ್ಯ ಸಾಧಿಸಲು ಗ್ರಾಮಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ. ಹೀಗಾಗಿ ಕೈ ನಾಯಕರು ಶತಾಯಾಗತಾಯ ಗ್ರಾಪಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಗೆ ಬೆವರು ಹರಿಸಲು ಸಿದ್ಧರಾಗಿದ್ದಾರೆ.

ಬಿಜೆಪಿಗೂ ಸವಾಲು: ಬಿಜೆಪಿಗೆ ಗ್ರಾಪಂ ಚುನಾವಣೆ ಒಂದು ರೀತಿಯ ಸವಾಲಾಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಬಿಜೆಪಿ ಸ್ವಲ್ಪ ಮಟ್ಟಿಗೆ ಬಿಜೆಪಿ ಪ್ರತಿ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಕೆ ಮಾಡುತ್ತ ಬಂದಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತಗಳಿಕೆ ಸಾಧ್ಯವಾಗುತ್ತಿಲ್ಲ. ಹಿಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಈ ಬಾರಿ ಗ್ರಾಮೀಣ ಪ್ರದೇಶದಲ್ಲಿಯೂ ಕಮಲ ಅರಳಿಸಲು ನಾಯಕರು ಶ್ರಮ ಪಡುತ್ತಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿರುವುದು ಮತದಾರರನ್ನು ಸೆಳೆಯಲು ಮತ್ತಷ್ಟು ಸುಲಭವಾಗಲಿದೆ. ಶಾಸಕರು ಸಹ ಬಿಜೆಪಿಯವರೇ ಇರುವುದರಿಂದ ಎಲ್ಲ ಗ್ರಾಪಂಗಳಲ್ಲಿ ಮೇಲುಗೈ ಸಾಧಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳಿದ್ದರೂ ಅವುಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಇದೇ ಮಾನದಂಡವಿಟ್ಟುಕೊಂಡು ಬಿಜೆಪಿ ಬೆಂಬಲಿತರು ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಹಾಗೂ ಮತಬೇಟೆಗೆ ಸಜ್ಜಾಗಿದ್ದಾರೆ.

ಗ್ರಾಪಂನಲ್ಲಿ ಮೇಲುಗೈ ಸಾಧಿಸಿದ ಪಕ್ಷಕ್ಕೆ ಜಿಪಂ, ತಾಪಂ ಸುಲಭ

ಇನ್ನಾರು ತಿಂಗಳಲ್ಲಿ ಜಿಪಂ ಹಾಗೂ ಏಳು ತಾಪಂಗಳ ಅವಧಿ ಮುಕ್ತಾಯವಾಗಿ ಚುನಾವಣೆ ಘೊಷಣೆಯಾಗಲಿದೆ. ಜಿಪಂ ಹಾಗೂ ತಾಪಂಗೆ ಸದಸ್ಯರು ಗ್ರಾಮೀಣ ಪ್ರದೇಶಗಳಿಂದಲೇ ಆಯ್ಕೆಯಾಗಬೇಕಿರುವುದರಿಂದ ಗ್ರಾಪಂನಲ್ಲಿ ಮೇಲುಗೈ ಸಾಧಿಸುವುದು ಕೈ, ಕಮಲ ಪಕ್ಷಕ್ಕೆ ಮಹತ್ವದ್ದಾಗಿದೆ. ಯಾವ ಪಕ್ಷದ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೋ ಅವರು ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಜಿಪಂ ಹಾಗೂ ತಾಪಂ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಸಹ ಗ್ರಾಪಂ ಚುನಾವಣೆಯಲ್ಲಿ ಸಾಧ್ಯವಿದ್ದಷ್ಟು ಬೆವರು ಹರಿಸಲು ಸಜ್ಜಾಗಿದ್ದಾರೆ. ಆಯಾ ಕ್ಷೇತ್ರವಾರು ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಆಯ್ಕೆಗೊಳಿಸಲು ಆಕಾಂಕ್ಷಿಗಳಿಗೆ ಉಭಯ ಪಕ್ಷದ ನಾಯಕರು ಸವಾಲನ್ನು ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net