

ಮಂಡ್ಯ: ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆಂದು ಭೂಮಿಯನ್ನು ಕೊಟ್ಟು ಕಡಿಮೆ ಪರಿಹಾರ ಪಡೆದಿರುವ ಸಂತ್ರಸ್ತರು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪರಿಹಾರದ ತಾರತಮ್ಯ ಕುರಿತು ಸುಮಾರು ಹೊತ್ತು ಚರ್ಚೆ ನಡೆಯಿತು. ಭೂಮಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರಿಗೆ ಅನ್ಯಾಯವಾಗಿದೆ. ಅಂದು ಏನೇನೋ ಸಬೂಬು ಹೇಳಿ ಕಡಿಮೆ ಬೆಲೆಗೆ ಭೂಮಿ ಪಡೆದುಕೊಳ್ಳಲಾಗಿದೆ. ಜತೆಗೆ ಮುಂದೆ ಬೆಲೆ ಹೆಚ್ಚಾದರೆ ನೀಡುತ್ತೇವೆ ಎನ್ನುವ ಭರವಸೆ ನೀಡಲಾಗಿತ್ತು. ಅದರಂತೆ ನ್ಯಾಯಯುತವಾದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಏನಿದು ಪರಿಹಾರದ ಗೊಂದಲ?: ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆಂದು ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿಯಿಂದ ಹೊಸಹೊಳಲಿನ ಹೊರಭಾಗದಲ್ಲಿ ಸುಮಾರು 8 ಕಿ.ಮೀ ವ್ಯಾಪ್ತಿಯಲ್ಲಿ ಅಂದಾಜು 59 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಆ ವೇಳೆ 30 ಎಕರೆ ಜಮೀನನ್ನು ರೈತರಿಂದ ನೇರ ಖರೀದಿ ಮಾಡಲಾಗಿತ್ತು. ಅಂತೆಯೇ ಪ್ರತಿ ಗುಂಟೆಗೆ 33 ಸಾವಿರ ರೂ ನೀಡಲಾಗಿತ್ತು. ಮಾತ್ರವಲ್ಲದೆ ರಸ್ತೆ ಮಾಡುವುದು ಖಚಿತವಾಗಿರುವುದರಿಂದ ಭೂಮಿ ವಶಪಡಿಸಿಕೊಳ್ಳುತ್ತೇವೆ. ಜಮೀನು ಕೊಡದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಸುಮ್ಮನೆ ಅಲೆದಾಡುವುದು ಬೇಡವೆಂದು ಸಬೂಬು ಹೇಳಿ ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡಿದ್ದಾರೆಂದು ರೈತರು ಆರೋಪಿಸಿದರು.
ಜತೆಗೆ ಭವಿಷ್ಯದಲ್ಲಿ ದರ ಹೆಚ್ಚಾದರೆ ಅದನ್ನು ನೀಡುವುದಾಗಿ ಅಂದು ಜಿಲ್ಲಾಡಳಿತ ಮೌಖಿಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಜಮೀನು ಕೊಟ್ಟಿದ್ದಾರೆ. ಆದರೆ ಪ್ರಸ್ತುತ ಪ್ರತಿ ಗುಂಟೆಗೆ ಸುಮಾರು 2 ಲಕ್ಷ ರೂ ಇದೆ. ಆದ್ದರಿಂದ ಇಂದಿನ ಬೆಲೆಯನ್ನು ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ನೀಡುವ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ರೈತರ ಮನವಿಗೆ ಸ್ಪಂದಿಸಿದ ಡಿಸಿ, ದಾಖಲಾತಿಯೊಂದಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ರೈತರಾದ ಚಿಕ್ಕೋನಹಳ್ಳಿ ಚೇತನ್‌ಕುಮಾರ್, ನಾಗರಾಜು, ಜಯರಾಂ, ಜಗದೀಶ್, ಈರೇಗೌಡ, ನಂಜೇಗೌಡ, ಜಯಣ್ಣ, ಕೊಂಡೇಗೌಡ, ಚಿಕ್ಕಹೊಸಹಳ್ಳಿ ಜಗದೀಶ್, ಅಗ್ರಹರಬಾಚಹಳ್ಳಿ ಜಲೇಂದ್ರ, ಪ್ರದೀಪ್, ಜವರಪ್ಪ ಇತರರಿದ್ದರು.