

ಮಂಡ್ಯ: ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನೀಡಲಾಗುವ ಬರ ಪರಿಹಾರದ ಹಣವನ್ನು ಪಡೆಯಲು ರೈತರು ಫ್ರೂಟ್ಸ್ ಐ.ಡಿ ಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಫ್ರೂಟ್ಸ್ ಐ.ಡಿ ಯಲ್ಲಿ ಜಮೀನಿನ ವಿವರ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಾಲ್ಕು ದಿನದಲ್ಲಿ ಶೇ.100 ಸಾಧನೆಯಾಗಬೇಕು ಎಂದರು.
ಜಿಲ್ಲೆಯಲ್ಲಿ 16,11,337 ಪ್ಲಾಟ್‌ಗಳಿವೆ. ಈ ಪೈಕಿ 12,11,626 ಪ್ಲಾಟ್‌ಗಳು ನೋಂದಣಿಯಾಗಿ ಶೇ.75.2 ಸಾಧನೆಯಾಗಿರುತ್ತದೆ. ಬರ ಪರಿಹಾರ ಹಣ ಬಿಡುಗಡೆಯಾದರೆ ಪಾವತಿ ಕೆಲಸ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೋಂದಣಿ ಕಷ್ಟಕರವಾಗಿರುತ್ತದೆ. ಆದ್ದರಿಂದ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ನಾಲ್ಕು ದಿನದಲ್ಲಿ ರೈತರ ಪ್ಲಾಟ್ ವಿವರ ಅಪ್‌ಲೋಡ್ ಮಾಡಿ ಶೇ.100ಸಾಧನೆ ಯಾಗಬೇಕು ಎಂದು ಸೂಚಿಸಿದರು.
ನೋಂದಣಿ ಮಾಡಿಕೊಂಡು ಜಮೀನಿನ ವಿವರ ಅಪ್‌ಲೋಡ್ ಮಾಡುವಂತೆ ಹಲವು ಬಾರಿ ತಿಳಿಸಲಾಗಿದೆ. ಆದರೂ ಸಹ 3,99,711 ಪ್ಲಾಟ್‌ಗಳ ನೋಂದಣಿ ಮಾಡಿಕೊಂಡಿರುವುದಿಲ್ಲ. ರೈತರು ಸಹ ಈ ಬಗ್ಗೆ ಕಾಳಜಿ ವಹಿಸಿ ತಮ್ಮ ಗ್ರಾಮದ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.