ವರದಿ ಬಂದ ಬಳಿಕ ಪರಿಹಾರ ವಿತರಣೆ

SRP_11-01(a)jpj
ತಾಲೂಕಿನ ದರಸಗುಪ್ಪೆ ಗ್ರಾಮ ಸಮೀಪದ ಸಿಡಿಎಸ್ ನಾಲೆಯ 26.5ನೇ ಮೈಲಿಗಲ್ಲಿನ ತೂಬಿನ ಬಳಿ ರಣಮಳೆಯಿಂದ ಕೊಚ್ಚಿಹೋದ ನಾಲೆಯ ಏರಿ ಹಾಗೂ ಹಾನಿಗೊಂಡ ಕೃಷಿ ಭೂಮಿಗಳನ್ನು ಶನಿವಾರ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಪರಿಶೀಲಿಸಿದರು. ಎ.ಬಿ.ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಡಾ.ಕುಮಾರ, ಕೆ.ಆರ್.ನಂದಿನಿ, ಇದ್ದರು.
Published on

ಶ್ರೀರಂಗಪಟ್ಟಣ: ತೀವ್ರ ಮಳೆಯಿಂದ ತುಂಬಿ ಹರಿದ ಸಿಡಿಎಸ್ ನಾಲೆಯ ನೀರಿನಿಂದ ಹಾನಿಗೊಳಗಾದ ರೈತರ ಕೃಷಿ ಭೂಮಿ ಮತ್ತು ಬೆಳೆಗಳಿಗೆ ಸಂಬಂಧಪಟ್ಟ ಇಲಾಖೆಗಳ ಸರ್ವೇ ವರದಿ ಬಳಿಕ ರಾಜ್ಯ ಸರ್ಕಾರದಿಂದ ಪರಿಹಾರ ವಿತರಿಸಲಾಗುವುದು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ನೀಡಿದರು.

ತಾಲೂಕಿನ ದರಸಗುಪ್ಪೆ ಗ್ರಾಮದ ಸಮೀಪ ಶುಕ್ರವಾರ 1.5 ಮೀಟರ್ ಉದ್ದ ನಾಲೆ ಏರಿ ಒಡೆದು ಸಾಕಷ್ಟು ಕೃಷಿಭೂಮಿ ನಾಶಕ್ಕೆ ಕಾರಣವಾಗಿದ್ದ ಸಿಡಿಎಸ್(ಚಿಕ್ಕ ದೇವರಾಯ ಸಾಗರ)ನಾಲೆಯ 26.5ನೇ ಮೈಲಿಗಲ್ಲು ಸ್ಥಳ ಸೇರಿದಂತೆ ಶನಿವಾರ ಕೂಡಲಕುಪ್ಪೆ ಗ್ರಾಮಕ್ಕೆ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಎರಡ್ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಸಿಡಿಎಸ್ ನಾಲೆ ಉಕ್ಕಿ ಏರಿ ಒಡೆಯುವ ಮೂಲಕ ಸಾಕಷ್ಟು ಬೆಳೆ ಹಾನಿಯಾಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಈ ಮಳೆಯ ಆರ್ಭಟ ನಿಂತ ಬಳಿಕ ಜಂಟಿ ಸರ್ವೇ ನಡೆಸಲಾಗುವುದು. ಯಾರ ಬೆಳೆ ಎಷ್ಟು ಹಾನಿಯಾಗಿದೆ ಎಂದು ಪರಿಶೀಲಿಸಿ, ಅವುಗಳಿಗೆ ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ವೇ ನಂತರವೇ ಎಷ್ಟು ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂಬುದು ತಿಳಿಯಲಿದೆ. ಸದ್ಯಕ್ಕೆ ಸಿಡಿಎಸ್ ನಾಲೆ ನೀರನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಮಳೆ ಪೂರ್ಣ ನಿಂತ ಬಳಿಕ ಹಾನಿಯಾದ ನಾಲೆಯನ್ನು ತಕ್ಷಣ ದುರಸ್ಥಿಪಡಿಸಲಾಗುವುದು ಎಂದರು.

ಪ್ರಸ್ತುತ ಎನ್‌ಡಿಆರ್‌ಎಫ್‌ನಲ್ಲಿ 1 ಹೆಕ್ಟೇರ್ ಮಳೆ ಆಶ್ರಿತ ಬೆಳೆಗಳಿಗೆ 8.5 ಸಾವಿರ ರೂ., ನೀರಾವರಿ ಆಶ್ರಿತ ಬೆಳೆಗಳಿಗೆ 17 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗೆ 22.5 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲುಬುರ್ಗಿ, ಧಾರವಾಡದಲ್ಲಿ ರೈತರ ಜತೆಗೆ ಮಾತನಾಡಿ ಮಾಹಿತಿ ಕಲೆ ಹಾಕಲಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಬೆಳೆಗಳಿಗೆ ಅಲ್ಲಿನ ರೈತರ ಬೇಡಿಕೆಯಂತೆ ಎಲ್ಲ ಬಗೆಯ ಬೆಳೆಗಳಿಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 8.5 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಲಾಗಿದೆ. ಇಲಾಖೆಗಳ ಜಂಟಿ ಸರ್ವೇ ನಡೆದ ತಕ್ಷಣ ಯಾರು ಕಾಯುವಂತಿಲ್ಲ. ಪರಿಹಾರದ ಹಣವನ್ನು ನೀಡಲಾಗುವುದು. ಈ ಪ್ರಕ್ರಿಯೆಯು ಮಳೆ ನಿಂತ ವಾರದೊಳಗೆ ಮಾಡಲಾಗುತ್ತದೆ. ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ಆ ವಿಮೆ ಹಣದ ಜತೆ ರಾಜ್ಯ ಸರ್ಕಾರದ ಸಮಾನ ನೀತಿಯ ಪರಿಹಾರ ನೀಡಲಾಗುವುದು ಎಂದರು.

ಇದೊಂದು ಸಾಮಾನ್ಯ ವಿಚಾರ: ಸಿಎಂ ಸಿದ್ದರಾಮಯ್ಯ ಅವರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಇದು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಆಗುವ ಸಾಮಾನ್ಯ ಸಭೆ. ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಕ್ರಮ ಕುರಿತು ಸಿಎಂ ನಡೆಸುವ ಡಿನ್ನರ್ ಮೀಟಿಂಗ್. ಇಲ್ಲಿ ಯಾವುದೇ ರಾಜಕೀಯ ಚರ್ಚೆ ಆಗುವುದಿಲ್ಲ. ಪ್ರಸ್ತುತ ಬಿಹಾರ ಚುನಾವಣೆ ನಡೆಯುತ್ತಿದೆ. ರಾಜ್ಯದ 136 ಜನಪ್ರತಿನಿಧಿಗಳಿಗೂ ಮಂತ್ರಿ ಆಗಬೇಕು ಎನ್ನೋ ಆಸೆ ಇದೆ. ಆದರೆ ಆಸೆ ಇದ್ದವರಿಗೆಲ್ಲ ಪಕ್ಷ ಏನಾದರೂ ಮಾಡಬೇಕಿದೆ. ಇರುವವರಲ್ಲೇ ತೆಗೆದು ಬೇರೆಯವರಿಗೆ ಸ್ಥಾನ ಕೊಡ್ತಾರೆ. 34 ಜನರಲ್ಲಿ ಎಷ್ಟು ಜನ ತೆಗಿತಾರೋ ಗೊತ್ತಿಲ್ಲ... ಆದರೆ ಅದು ಪಕ್ಷಕ್ಕೆ ಬಿಟ್ಟ ವಿಚಾರ. ನಾಳಿನ ಮೀಟಿಂಗ್‌ನಲ್ಲಿ ಯಾವ ಚರ್ಚೆ ಇಲ್ಲ ಎಂದರು.

ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಶ್ರೀರಂಗಪಟ್ಟಣ ಕ್ಷೇತ್ರದ ತಹಸೀಲ್ದಾರ್ ಚೇತನ ಯಾದವ್, ನೀರಾವರಿ ನಿಗಮದ ವ್ಯವಸ್ಥಾಪಕ ಮಹೇಶ್, ಜಿಲ್ಲಾ ಅಧೀಕ್ಷಕ ಇಂಜಿನಿಯರ್ ರಘುರಾಮ್, ಕಾವೇರಿ ನೀರಾವರಿ ನಿಗಮದ ಇಇ ಜಯಂತ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net