ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ನಾಯಕ ಅಂಬೇಡ್ಕರ್

hnl vinaya
Published on

ಹೊನ್ನಾಳಿ: ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮತ್ತು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಕೊಟ್ಟ ಧೀಮಂತ ವ್ಯಕ್ತಿ ಅಂಬೇಡ್ಕರ್ ಎಂದು ಸ್ವಾಭಿಮಾನಿ ಬಳಗದ ಮುಖಂಡ ಹಾಗೂ ಇನ್​ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಮಾಲೀಕ ಜಿ.ಬಿ. ವಿನಯಕುಮಾರ್ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಸೋಮವಾರ ಪದವಿ, ಪಿಯು, ಐಟಿಐ ಹಾಗೂ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ದಿಕ್ಸೂಚಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ನೀಡಿರುವ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರಿಗಳನ್ನು ಪ್ರಶ್ನಿಸಬೇಕು, ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ನಿರಂತರ ಅಭ್ಯಾಸ ಮಾಡಬೇಕು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಪ್ರತಿನಿತ್ಯ ಒಂದು ಗಂಟೆ ದಿನಪತ್ರಿಕೆ ಓದಬೇಕು ಎಂದು ತಿಳಿಸಿದರು.

ಶಿಕ್ಷಣವನ್ನು ಕೇವಲ ಜೀವನದ ಆಸರೆಗಾಗಿ ಅಲ್ಲದೆ ಇತರರ ಅಭಿವೃದ್ಧಿಗಾಗಿ ಬಳಸಿಕೊಳ್ಳಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಅಲಂಕರಿಸಿ ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕು ಎಂಬ ಆಶಯದೊಂದಿಗೆ ದೇಶದೆಲ್ಲೆಡೆ ಇನ್​ಸೈಟ್ಸ್ ಐಎಎಸ್ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ನೂರಾರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ಸಾಮಾನ್ಯರಿಗೆ ನ್ಯಾಯ ಒದಗಿಸುತ್ತಿದ್ದಾರೆ ಎಂದರು.

ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಈ ಸಮಯದಲ್ಲಿ ಎಡವಿದರೆ ಜೀವನ ಪೂರ್ತಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸತತ ಅಧ್ಯಯನ ಮಾಡಿದಾಗ ವಿಪುಲ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.

ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಜ್ಞಾನ ಸಂಪಾದನೆ ಮಾಡಬಹುದು, ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸಬೇಕೆಂಬ ಛಲ ಇರಬೇಕು ಎಂದರು.

ರಾಜು ಕಣಗಣ್ಣಾರ್, ರಾಜು ಮೌರ್ಯ, ಮಲ್ಲೇಶ್ ಮಾಳಕ್ಕಿ, ಮಂಜುನಾಥ್, ಡಿ.ಸಿ. ತಮ್ಮಣ್ಣ, ಸುದೀಪ್, ವಿಜಯ ಕಾಲೇಜಿನ ಪ್ರಾಚಾರ್ಯ ವಸಂತ್, ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ್, ಸಾಸ್ವೇಹಳ್ಳಿ ಕಾಲೇಜಿನ ಪ್ರಾಚಾರ್ಯ ದೇವೀರಪ್ಪ, ಸರ್ಕಾರಿ ಪಾಲಿಟೆಕ್ನಿಕ್ ದೊಡ್ಡಸ್ವಾಮಿ, ಮಾಲತಿ, ಡಾ. ಶಿವಪ್ಪ, ಹನುಮಂತಪ್ಪ ಸೊರಟೂರು, ಲಕ್ಷ್ಮೀದೇವಮ್ಮ, ಸುಚಿತ್ರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net