

ಕೋಲಾರ: ಕಂಪನಿಗಳಿಂದ ವಸೂಲಿ ಮಾಡುವ ಜಾಯಮಾನ ನಮ್ಮದಲ್ಲ. ಹಣದ ಅವಶ್ಯವಿದ್ದರೆ ನಾವೇ ಕೊಡುತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲೂಕಿನ ವಕ್ಕಲೇರಿ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಹೊಂಡಾ ಕಂಪನಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ, ಕೆಲವು ಕಂಪನಿಗಳು ನಿರಂತರವಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬಂದಿವೆ. ಆದರೆ, ಕೆಲವು ಕಂಪನಿಗಳು ಸಾಮಾಜಿಕ ಹೊಣೆ ಮರೆತಿವೆ. ಅವರು ಸ್ಥಳಿಯರಿಗೆ ಒಳ್ಳೆಯದು ಮಾಡಿದರೆ ನಾವೂ ಸಹಾಯಕ್ಕೆ ಸಿದ್ಧ. ಇಲ್ಲವಾದರೆ ತೊಂದರೆ ಕೊಡುವುದು ನಮಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
‘ಕೈಗಾರಿಕೆಗಳು ಸಿಎಸ್ಆರ್ ಅನುದಾನವನ್ನು ಶಿಕ್ಷಣ ಹಾಗೂ ಆರೋಗ್ಯಕ್ಕೆ ನೀಡಬೇಕು. ನಂತರದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಬಳಕೆಯಾಗಬೇಕು. ಬಡವರು ಮತ್ತು ವೃದ್ಧರ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು. ಗ್ರಾಮೀಣ ಪ್ರದೇಶದ ಜನರಿಗಾಗಿ ಇಂತಹ ದೊಡ್ಡ ಮಟ್ಟದಲ್ಲಿ ಆರೋಗ್ಯ ಮೇಳ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ಕುಮಾರ್ ಮಾತನಾಡಿ, 2013ರಲ್ಲಿ ನರಸಾಪುರ ಕೈಗಾರಿಕಾ ಪ್ರದೇಶ ಪ್ರಾರಂಭಕ್ಕೂ ಮುಂಚೆ ಸ್ಥಳಿಯವಾಗಿ ಶುದ್ಧ ಕುಡಿಯುವ ನೀರು ಹಾಗೂ ಉದ್ಯೋಗಕ್ಕೆ ಸಮಸ್ಯೆಯಾಗಿತ್ತು. ಈಗ ಸಾಕಷ್ಟು ಉದ್ಯೋಗ ಸಿಗುತ್ತಿವೆ. ಜತೆಗೆ ಕೈಗಾರಿಕೆಗಳ ಸಿಎಸ್ಆರ್ ಅನುದಾನದಿಂದ ಶುದ್ಧ ನೀರಿನ ಘಟಕಗಳು, ಸರ್ಕಾರಿ ಶಾಲೆಗಳ ದುರಸ್ತಿ, ಹೈಮಾಸ್ಟ್ ದೀಪಸ ಸೇರಿ ಸಾಮಾಜಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.
ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಕೈಗಾರಿಕೆಗಳು ಆಯೋಜಿಸಿರುವ ಆರೋಗ್ಯ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು. ಇಂತಹ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಲೋಕೇಶ್, ರಾಜಣ್ಣ, ಸದಸ್ಯರಾದ ಚಿನ್ನಮ್ಮ, ಬೊಟ್ಟುರಾಜಪ್ಪ, ಮಂಜುನಾಥ್, ಜ್ಯೋತಿ ಮುನಿಯಪ್ಪ, ಮುಖಂಡರಾದ ಹಿನಾಯತ್, ರಘು, ಹನುಮಂತಣ್ಣ, ರಾಮಯ್ಯ, ಪಿಡಿಒ ಭಾರತಿ ಇತರರಿದ್ದರು.