ದಸರಾ ಪ್ರಾಯೋಜಕತ್ವಕ್ಕೆ ಆಸಕ್ತಿ ತೋರಿದ ಕಂಪನಿಗಳು

Dasara meeting
Published on

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಉತ್ಸವದ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಜಕತ್ವದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಹಲವು ಪ್ರತಿಷ್ಠಿತ ಕಂಪನಿಗಳು ಪ್ರಾಯೋಜಕತ್ವ ನೀಡಲು ಮುಂದೆ ಬಂದಿವೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ದಸರಾ ಪ್ರಾಯೋಜಕತ್ವ ಸಭೆಯಲ್ಲಿ ಪ್ರತಿಷ್ಠಿತ ಕಂಪನಿಗಳಾದ ಕೋಕಾ ಕೋಲಾ, ಟಿವಿಎಸ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎವಿಆರ್ ಜುವೆಲ್ಲರ್ಸ್‌ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ದಸರಾದ ವಿವಿಧ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುತ್ತೇವೆ ಎಂದು ಘೋಷಿಸಿದರು. ಎಸ್‌ಬಿಐ ಹಾಗೂ ವಿವಿಧ ಖಾಸಗಿ ಬ್ಯಾಂಕ್‌ಗಳು, ಸೈಕಲ್ ಪ್ಯೂರ್ ಅಗರ್‌ಬತ್ತೀಸ್ ಕಂಪನಿಗಳು ಮೇಲಧಿಕಾರಿಗಳೊಂ ದಿಗೆ ಚರ್ಚಿಸಿ ತೀರ್ಮಾನ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಂಪನಿಗಳು, ಸಂಘ ಸಂಸ್ಥೆಗಳು, ಎನ್‌ಜಿಒಗಳು ಜಿಲ್ಲಾಡಳಿತಕ್ಕೆ ಸಾಕಷ್ಟು ನೆರವನ್ನು ನೀಡಿ ವೆ. ಆ ಸಂದರ್ಭ ಎಲ್ಲರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಿಲ್ಲಾಡಳಿತಕ್ಕೆ ನೆರವು ನೀಡಿದ್ದರು. ಆದರೆ, ದಸರಾ ಸಂದರ್ಭದಲ್ಲಿ ನೀವು ನೀಡುವ ಸಹಕಾರ ತಕ್ಕ ಪ್ರತಿಫಲ ದೊರೆಯಲಿದೆ. ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯುವ ಸಂಭ್ರಮ, ಯುವ ದಸರಾ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಖಾಸಗಿ ಕಂಪನಿಗಳು, ಸಂಘ ಸಂಸ್ಥೆಗಳು, ಎನ್‌ಜಿಒಗಳು ಯಾವುದಾದರು ಒಂದು ನಿರ್ದಿಷ್ಟವಾದ ಕಾರ್ಯಕ್ರಮದ ಅಥವಾ ಇಡೀ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಬಹುದು. ಪ್ರತಿಯೊಂದು ಕಾರ್ಯಕ್ರಮದ ಪ್ರಾಯೋಜ ಕತ್ವಕ್ಕೆ ನಿರ್ದಿಷ್ಟ ಮೊತ್ತ ನಿಗದಿ ಪಡಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥ್ ಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಡಿಸಿಪಿ ಗೀತಾ ಪ್ರಸನ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net