

ಪೊನ್ನಂಪೇಟೆ:
ಪೊನ್ನಂಪೇಟೆ ತಾಲೂಕು ಕುಂದ ಗ್ರಾಮದಲ್ಲಿ ಸೋಮವಾರ ಮನೆಯೊಂದರ ಸಮೀಪ ದೊಡ್ಡಗಾತ್ರದ ಉಡ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಸುಮಾರು 5ರಿಂದ 6 ಅಡಿ ಉದ್ದದ ಉಡ ಕೊಡಂದೇರ ದಿಲೀಪ್ ಎಂಬವರ ಮನೆ ಸಮೀಪ ಕಾಂಪೌಂಡ್‌ಗೆ ಕುತ್ತಿಗೆ ಹಾಕಿ ಇಣುಕಿ ನೋಡುತ್ತ ಕೆಲಹೊತ್ತು ನಿಂತಿದ್ದನ್ನು ಕೆಲವರು ವೀಡಿಯೋ ಮಾಡಿದ್ದಾರೆ. ನಂತರ ಈ ಉಡ ಪಕ್ಕದ ಕಾಡಿನಲ್ಲಿ ಮರೆಯಾಗಿದೆ. ಉಡಗಳು ಈ ವ್ಯಾಪ್ತಿಯಲ್ಲಿ ಸಾಮಾನ್ಯವಾದರೂ ಇಷ್ಟೊಂದು ದೊಡ್ಡ ಗಾತ್ರದ ಉಡ ಈ ಹಿಂದೆ ಇಲ್ಲಿ ನೋಡಿರಲಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ಉಡ ಜಗತ್ತಿನಲ್ಲೇ ಅಪರೂಪ ಎಂದು ಗುರುತಿಸಲಾಗಿರುವ ಕೊಮೊಡೊ ಡ್ರ್ಯಾಗನ್ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳೂ ಇದಕ್ಕೆ ಧ್ವನಿಗೂಡಿಸಿದ್ದು ಇದು ಕೊಮೊಡೊ ಡ್ರ್ಯಾಗನ್ ಎಂಬುದು ಖಚಿತವಾಗಿಲ್ಲದೇ ಹೋದರೂ, ಈ ಭಾಗದಲ್ಲಿ ಅಪರೂಪ ಎನಿಸುವಷ್ಟು ದೊಡ್ಡಗಾತ್ರದ ಉಡ ಎಂದು ಹೇಳಬಹುದು. ಈ ಉಡದಿಂದ ಜನರು ಭಯಪಡುವ ಅಗತ್ಯ ಇಲ್ಲ. ಮತ್ತೊಮ್ಮೆ ಕಾಣಸಿಕ್ಕರೆ ವಿಷಯ ತಿಳಿಸುವಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.